ಜೆಡಿಎಸ್ ಗೆ ‘ಬಿಗ್ ಶಾಕ್’ : ಇಂದು ‘ಪರಿಷತ್’ ಸದಸ್ಯತ್ವಕ್ಕೆ ಮರಿತೀಬ್ಬೆಗೌಡ ರಾಜೀನಾಮೆ

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹೊತ್ತಲ್ಲಿ ಜೆಡಿಎಸ್ ಗೆ ಬಿಗ್ ಶಾಕ್ ಎದುರಾಗಿದ್ದು, ವಿಧಾನ ಪರಿಷತ್ ಸದಸ್ಯ  ಮರಿತಿಬ್ಬೇಗೌಡ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಲಿದ್ದಾರೆ. ಜೆಡಿಎಸ್

ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಹುಬ್ಬಳ್ಳಿಯ ಗೃಹ ಕಚೇರಿಗೆ ಆಗಮಿಸಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜೀನಾಮೆ ಸ್ವೀಕರಿಸಿದ ಸಭಾಪತಿ ಬಸವರಾಜ ಹೊರಟ್ಟಿಯವರು, ಮರಿತಿಬ್ಬೇಗೌಡ ಸ್ವ ಹಿತಾಸಕ್ತಿಯಿಂದ ರಾಜೀನಾಮೆ ನೀಡಿದ್ದು, ರಾಜೀನಾಮೆ ಅಂಗೀಕರಿಸಲಾಗಿದೆ. ಇನ್ನೂ ಮುಂದಿನ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮರಿತಿಬ್ಬೇಗೌಡ, “ಕುಟುಂಬ ರಾಜಕಾರಣಕ್ಕೆ ಬೇಸತ್ತು ನಾನು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ. ಪಕ್ಷದಲ್ಲಿ ನಿಷ್ಠಾವಂತ ಶಾಸಕನಾಗಿ ಕೆಲಸ ಮಾಡಿದ್ದೇನೆ. ಶಿಕ್ಷಕ ಸಮುದಾಯದ ಹಿತವನ್ನು ಕಾಪಾಡಿದ್ದೇನೆ. ಹೆಚ್​ ಡಿ ಕುಮಾರಸ್ವಾಮಿಯವರು ನಮ್ಮಲ್ಲಿ ಭಿನ್ನಾಭಿಪ್ರಾಯ ತಂದು ನಮ್ಮನ್ನು ಕಡೆಗಣೆ ಮಾಡಿದರು” ಎಂದು ಆರೋಪಿಸಿದರು.

“ನಾನು ಭಿನ್ನಾಭಿಪ್ರಾಯಗಳ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದೆ. ಆದರೆ ಅದು ಅವರಿಗೆ ಇಷ್ಟವಾಗಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಅವರನ್ನು ಅಭ್ಯರ್ಥಿ ಮಾಡುವುದು ಬೇಡ, ಮಂಡ್ಯ ಜಿಲ್ಲೆಯ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಹೇಳಿದ್ದೆ. ಇದು ನಮ್ಮ ನಾಯಕರಿಗೆ ಇಷ್ಟವಾಗಿಲ್ಲ. ನನ್ನ ಮೇಲೆ ಸಂಶಯಾಸ್ಪದ ದೃಷ್ಟಿಯಿಂದ ಪಕ್ಷದ ವರಿಷ್ಠರು ನೋಡುತ್ತಿದ್ದರು. ಪಕ್ಷದ ಸಂಘಟನೆಗೂ ನನ್ನನ್ನು ಪರಿಣಿಗಿಸಿಲ್ಲ. ನನ್ನ ಕ್ಷೇತ್ರದ ಶಿಕ್ಷಕ ಮತದಾರರ ಅಭಿಪ್ರಾಯದಂತೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದರು.

” ಕೆಲವೇ ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ. ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಈಗಾಗಲೇ ರಾಜಿನಾಮೆ ನೀಡಿದ್ದೇನೆ. ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ನಮ್ಮ ನಾಯಕರು ಮೊಸಳೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಇದು ಬಹಳಷ್ಟು ಅಪಾಯಕಾರಿ. ಮೊಸಳೆ ಅಂದರೆ ಬಿಜೆಪಿ” ಎಂದು ಕಿಡಿ‌ಕಾರಿದರು.

“ಕುಮಾರಸ್ವಾಮಿ, ದೇವೇಗೌಡ, ರೇವಣ್ಣ ಮಾತ್ರ ಪಕ್ಷದ ಬಗ್ಗೆ ನಿರ್ಧಾರ ಮಾಡುತ್ತಾರೆ. ಸಾಮಾನ್ಯ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಜೆಡಿಎಸ್ ಒಂದು ಕುಟುಂಬದ ಪಕ್ಷ ಅಂತ ಎಲ್ಲರಿಗೂ ಗೊತ್ತು. ಪ್ರಧಾನಿ ನರೇಂದ್ರ ಮೋದಿ ಸಹ ಇದನ್ನು ಸಾಕಷ್ಟು ಬಾರಿ ಹೇಳಿದ್ದಾರೆ. ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲ, ಒಂದು ಕುಟುಂಬದ ಪಕ್ಷ. ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ನಾವು ಅದನ್ನು ಕಾದು ನೋಡುತ್ತೇವೆ” ಎಂದು ಹೇಳಿದರು.

ಮರಿತಿಬ್ಬೇಗೌಡ  ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.

 

Donate Janashakthi Media

Leave a Reply

Your email address will not be published. Required fields are marked *