‘ಮರಿ’ ಸರ್ವಾಧಿಕಾರಿ ಫಿಲಿಪ್ಪೀನ್ಸ್ ಅಧ್ಯಕ್ಷ

ವಸಂತರಾಜ ಎನ್.ಕೆ.

ಫಿಲಿಪ್ಪಿನ್ಸ್ ನ ಹೊಸ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ 1986 ರಲ್ಲಿ ದಶಕಗಳ ಕ್ರೂರ ಸರ್ವಾಧಿಕಾರಿ ಆಡಳಿತದ ನಂತರ ಓಡಿಸಲಾಗಿದ್ದ ಸೀನಿಯರ್ ಮಾರ್ಕೋಸ್ ಮಗ ಮಾತ್ರವಲ್ಲ, ರಾಜಕೀಯ ಸಹಚರ ಸಹ ಆಗಿದ್ದರು.  ಒಂದು ಪ್ರಾಂತದ ಗವರ್ನರ್ ಆಗಿ ಆ ಕ್ರೂರ ಆಡಳಿತದ ಭಾಗವೂ ಆಗಿದ್ದರು. ಆ ಕ್ರೂರ ಆಡಳಿತದಲ್ಲಿ ಸಾವಿರಾರು ವಿರೋಧಿಗಳನ್ನು ಬಂಧಿಸಲಾಗಿತ್ತು, ಚಿತ್ರಹಿಂಸೆಗೆ ಗುರಿ ಮಾಡಲಾಗಿತ್ತು. ‘ಮಾಯ’ ಮಾಡಲಾಗಿತ್ತು. ಭಾರೀ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಮಾರ್ಕೋಸ್ ಕುಟುಂಬ 10 ಶತಕೋಟಿ ಡಾಲರಿನಷ್ಟು ರಾಷ್ಟ್ರೀಯ ಆಸ್ತಿಯನ್ನು ಲೂಟಿ ಮಾಡಿತ್ತು.

ಪ್ರಜಾಪ್ರಭುತ್ವ ಹಿಸುಕಿದ ರೆಕಾರ್ಡ್ ಉಳ್ಳ ಸರ್ವಾಧಿಕಾರಿಗಳ ಕುರಿತು ಗೊತ್ತಿದ್ದೂ ಅವರನ್ನು ಉನ್ನತ ಚುನಾಯಿತ ಸ್ಥಾನಗಳಿಗೆ ಚುನಾಯಿಸುವ ಇತ್ತೀಚಿನ ಜಾಗತಿಕ ಟ್ರೆಂಡ್ ನ್ನು ಫಿಲಿಪ್ಪೀನ್ಸ್ ಅನುಸರಿಸಿದೆ. ಜನತಾ ಕ್ರಾಂತಿ ನಡೆದು ದೇಶಬಿಟ್ಟು ಓಡಿಸಲಾಗಿದ್ದ ಸರ್ವಾಧಿಕಾರಿ ಮಾರ್ಕೋಸ್ ನ ಮಗ ಜೂನಿಯರ್ ಮಾರ್ಕೋಸ್ ಭಾರೀ ಬಹುಮತದಿಂದ (ಶೇ.59) ಅಧ್ಯಕ್ಷರಾಗಿ ಮುಂದಿನ 6 ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. ಅವರಿಗೆ ‘ಬೊಂಗ್ ಬೊಂಗ್’ ಎಂಬ ಅಡ್ಡ ಹೆಸರಿದೆ.  ಅವರು ಲೆನಿ ರೊಬ್ರೆಡೊ ಅವರನ್ನು ಭಾರೀ ಅಂತರದಿಂದ (ಶೇ.31) ಸೋಲಿಸಿದ್ದಾರೆ.  2016ರ ಉಪಾಧ್ಯಕ್ಷರ ಚುನಾವಣೆಯಲ್ಲಿ ಲೆನಿ ರೊಬ್ರೆಡೊ ಮಾರ್ಕೊಸ್ ಜೂನಿಯರ್ ಅವರನ್ನು ಸೋಲಿಸಿದ್ದರು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಉಪಾಧ‍್ಯಕ್ಷರಾಗಿ ಹಿಂದಿನ ಅಧ್ಯಕ್ಷ ರೊಡ್ರಿಗೊ ಡೂತೆರ್ತೆ ಮಗಳಾದ ಸಾರಾ ಡೂತೆರ್ತೆ ಸಹ ಭಾರೀ (ಶೇ.61) ಬಹುಮತದಿಂದ ಗೆದ್ದಿದ್ದಾರೆ. ಅವರು ಕಿಕೊ ಪಂಗಿಲಿನಾನ್ ಅವರನ್ನು ಸಹ ಭಾರೀ ಅಂತರದಿಂದ (ಶೇ.43) ಸೋಲಿಸಿದ್ದಾರೆ. ಶೇ.80ರಷ್ಟು ಮತದಾನವಾಗಿತ್ತು.

ಫಿಲಿಪ್ಪಿನ್ಸ್ ನ ಹೊಸ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ 1986 ರಲ್ಲಿ ದಶಕಗಳ ಕ್ರೂರ ಸರ್ವಾಧಿಕಾರಿ ಆಡಳಿತದ ನಂತರ ಓಡಿಸಲಾಗಿದ್ದ ಸೀನಿಯರ್ ಮಾರ್ಕೋಸ್ ಮಗ ಮಾತ್ರವಲ್ಲ, ರಾಜಕೀಯ ಸಹಚರ ಸಹ ಆಗಿದ್ದರು.  ಒಂದು ಪ್ರಾಂತದ ಗವರ್ನರ್ ಆಗಿ ಆ ಕ್ರೂರ ಆಡಳಿತದ ಭಾಗವೂ ಆಗಿದ್ದರು. ಆ ಕ್ರೂರ ಆಡಳಿತದಲ್ಲಿ ಸಾವಿರಾರು ವಿರೋಧಿಗಳನ್ನು ಬಂಧಿಸಲಾಗಿತ್ತು, ಚಿತ್ರಹಿಂಸೆಗೆ ಗುರಿ ಮಾಡಲಾಗಿತ್ತು. ‘ಮಾಯ’ ಮಾಡಲಾಗಿತ್ತು. ಭಾರೀ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಮಾರ್ಕೋಸ್ ಕುಟುಂಬ 10 ಶತಕೋಟಿ ಡಾಲರಿನಷ್ಟು ರಾಷ್ಟ್ರೀಯ ಆಸ್ತಿಯನ್ನು ಲೂಟಿ ಮಾಡಿತ್ತು. ಹಿಂದಿನ ಅಧ್ಯಕ್ಷ ರೊಡ್ರಿಗೊ ಡೂತೆರ್ತೆ ಸಹ ಭಯೋತ್ಪಾದನೆ, ಮಾದಕ ದ್ರವ್ಯಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಹೆಸರಲ್ಲಿ ಸಾವಿರಾರು ‘ಎನ್ ಕೌಂಟರ್’ ಕೊಲೆಗಳನ್ನು ಮಾಡಿಸಿ ಸರ್ವಾಧಿಕಾರಿ ವರ್ತನೆಗಳನ್ನು ಪ್ರದರ್ಶಿಸಿದ್ದರು.

ಅಧ್ಯಕ್ಷರಾಗಿ ಮಾರ್ಕೋಸ್ ಜೂನಿಯರ್ ಆಯ್ಕೆ ಫಿಲಿಪ್ಪೀನ್ಸ್ ದೇಶದ ತುಂಬಾ ಅಚ್ಚರಿ, ಆತಂಕ ಮೂಡಿಸಿದೆ. ಕ್ರಾಂತಿಯ ಮೂಲಕ ದೇಶ ಬಿಟ್ಟು ಓಡಿಸಲಾದ ಸರ್ವಾಧಿಕಾರಿ ಮತ್ತು ಭ್ರಷ್ಟ ಆಡಳಿತದ ಭಾಗವಾಗಿದ್ದ ಮಾರ್ಕೋಸ್ ಜೂನಿಯರ್ ನ್ನು ಚುನಾವಣೆಗೆ ಸ್ಪರ್ಧಿಸಲು ಅನರ್ಹವೆಂದು ಘೋಷಿಸಬೇಕೆಂದು ಹಲವು ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು. ಮಾರ್ಕೋಸ್ ಜೂನಿಯರ್ ಫಿಲಿಪ್ಪೀನ್ಸ್ ಗೆ ಮರಳಿದ ನಂತರವೂ ಅವನ ವಿರುದ್ಧ ತೆರಿಗೆಗಳ್ಳತನ ಸೇರಿದಂತೆ ಹಲವು ಪ್ರಕರಣಗಳು ಇರುವುದರಿಂದಲೂ ಸ್ಪರ್ಧಿಸಲು ಅನರ್ಹವೆಂದು ಘೋಷಿಸಬೇಕೆಂದು ಒತ್ತಾಯ ಬಂದಿತ್ತು. ಚುನಾವಣಾ ಪ್ರಚಾರದಲ್ಲಿ ಮತ್ತು ಚುನಾವಣೆಯ ದಿನದ ವರೆಗೆ ಸಹ ತೀವ್ರ ಚುನಾವಣಾ ಅಕ್ರಮಗಳ ಆಪಾದನೆಗಳು ಕೇಳಿಬಂದಿದ್ದವು. ಮಾರ್ಕೋಸ್ ಪರ (ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸಲಾದ) ಚುನಾವಣಾ ಪ್ರಚಾರ ಹಲವು ಅಕ್ರಮಗಳನ್ನು ಎಸಗಿತ್ತು. ಪೂರ್ಣ ದಾಖಲೆಗಳಿರುವ ಸೀನಿಯರ್ ಮಾರ್ಕೊಸ್ ಆಡಳಿತದ ಕರಾಳ ವಾಸ್ತವವನ್ನು ‘ವೈಟ್ ವಾಶ್’ ಮಾಡಿ ಅದು ‘ಸುವರ್ಣ ಯುಗ’ವೆಂದು ಪ್ರಚಾರದಲ್ಲಿ ಬಿಂಬಿಸಲಾಗಿತ್ತು. ವಿರೋಧಿ ಅಭ್ಯರ್ಥಿಯ ವಿರುದ್ಧ ಸುಳ್ಳುಗಳ ಸರಮಾಲೆಯಿರುವ ತೀವ್ರ ಅಪಪ್ರಚಾರವನ್ನು ಮಾಡಲಾಗಿತ್ತು. ವಿರೋಧಿ ಅಭ್ಯರ್ಥಿ ನಿಷೇಧಿತ ಭೂಗತ ಕಮ್ಯುನಿಸ್ಟ್ ಪಕ್ಷದ ರಹಸ್ಯ ಸದಸ್ಯತ್ವ ಹೊಂದಿದ್ದಾರೆಂದು ಹಸಿ ಸುಳ್ಳು ಹರಡಲಾಗಿತ್ತು. ವಿರೋಧಿ ಕಾರ್ಯಕರ್ತರ ವಿರುದ್ಧ ಹಿಂಸಾಚಾರ ನಡೆಸಲಾಗಿತ್ತು. ಅವರ ವಿರುದ್ಧ ಭಯೋತ್ಪಾದಕ ನಿಗ್ರಹ ಭ್ರಷ್ಟಾಚಾರ ನಿಗ್ರಹ ಪಡೆಗಳು ಕಾರ್ಯಾಚರಣೆಗಳನ್ನು ನಡೆಸಿ ಅವರಿಗೆ ಕಿರುಕುಳ ಕೊಡುತ್ತಿದ್ದರು. ಪೋಲಿಸ್ ಮತ್ತು ಮಿಲಿಟರಿಯ ಹಲವು ಸಿಬ್ಬಂದಿ ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧಿ ಅಭ್ಯರ್ಥಿಗಳ ವಿರುದ್ಧ ಸಕ್ರಿಯವಾಗಿ ಪ್ರಚಾರ ಮಾಡಿದ್ದು ಕಂಡು ಬಂದಿದೆ. ಚುನಾವಣಾ ದಿನ ಸಹ ವಿರೋಧಿ ಕಾರ್ಯಕರ್ತರ ವಿರುದ್ಧ ಹಲವು ಬೆದರಿಕೆಗಳ, ಹಿಂಸಾಚಾರದ ಘಟನೆಗಳು ನಡೆದ ವರದಿಯಾಗಿವೆ. 1992ರಲ್ಲಿ ಮತ್ತೆ ರಾಜಕೀಯ ಪ್ರವೇಶಿಸಿದ ಮಾರ್ಕೋಸ್ ಜೂನಿಯರ್ ಕುಟುಂಬದ ಅಪಕೀರ್ತಿ ಅಳಿಸಿ ಹಾಕಲು ಸಾಮಾಜಿಕ ಮಾಧ್ಯಮಗಳಲ್ಲಿ ದೀರ್ಘ ಪ್ರಚಾರ ಕೈಗೊಂಡಿದ್ದರು.

ಅಧ್ಯಕ್ಷರಾಗಿ ಮಾರ್ಕೋಸ್ ಜೂನಿಯರ್ ಆಯ್ಕೆ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದಿವೆ. ಹಲವಾರು ಸೀನಿಯರ್ ಮಾರ್ಕೋಸ್ ಆಡಳಿತದ ಸಂತ್ರಸ್ತರು, ವಿರೋಧ ಪಕ್ಷಗಳ ಕಾರ್ಯಕರ್ತರು ದೇಶದ ತುಂಬಾ ವ್ಯಾಪಕ ಮೆರವಣಿಗೆ, ಪ್ರತಿಭಟನೆಗಳನ್ನು ನಡೆಸಿದರು. ಹಲವು ವಿ,ವಿ ವಿದ್ಯಾರ್ಥಿಗಳು, ಶಿಕ್ಷಕರು ‘ಮಾರ್ಕೋಸ್ ಅಧ್ಯಕ್ಷತೆಯಲ್ಲಿ ಕ್ಲಾಸು ಸಾಧ್ಯವಿಲ್ಲ’ ಎಂಬ ಕರೆ ಕೊಟ್ಟಿದ್ದಾರೆ. ಯು.ಎಸ್ ನಲ್ಲಿ ನೆಲೆಸಿರುವ ಫಿಲಿಪ್ಪೀನರು ಸಹ  ಈ ಚುನಾವಣೆ ಸಕ್ರಮವಲ್ಲವೆಂದು ಪ್ರತಿಭಟಿಸಿದ್ದಾರೆ. ಪ್ರಜಾಪ್ರಭುತ್ವ ಹಿಸುಕಿದ ರೆಕಾರ್ಡ್ ಉಳ್ಳ ಸರ್ವಾಧಿಕಾರಿಗಳ ಕುರಿತು ಗೊತ್ತಿದ್ದೂ ಅವರನ್ನು ಉನ್ನತ ಚುನಾಯಿತ ಸ್ಥಾನಗಳಿಗೆ ಚುನಾಯಿಸುವ ಜಾಗತಿಕ ಟ್ರೆಂಡ್ ನ್ನು ದಕ್ಷಿಣ-ಪೂರ್ವ ಏಶ್ಯಾಕ್ಕೂ ಹರಡಿರುವುದು ಆತಂಕಕಾರಿ ಬೆಳವಣಿಗೆ.

Donate Janashakthi Media

Leave a Reply

Your email address will not be published. Required fields are marked *