ಬೆಂಗಳೂರು: ಕರ್ನಾಟಕ ರಾಜ್ಯದ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್ 4ರಂದು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳು 2022-23ರ ಆಯವ್ಯಯ ಮಂಡಿಸಲಿದ್ದಾರೆ.
ಇಂದು ಮಧ್ಯಾಹ್ನ ಸಚಿವ ಸಂಪುಟದ ಸಭೆ ನಡೆಸಲಾಗಿದ್ದು, ಸಭೆ ಬಳಿಕ ಬಜೆಟ್ ಮಂಡನೆಯ ದಿನಾಂಕವನ್ನು ಘೋಷಣೆ ಮಾಡಲಾಗಿದೆ. 2023ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳು ಇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಚೊಚ್ಚಲ ಬಜೆಟ್‌ಗೆ ಇದಾಗಿದೆ.
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡನೆ ಮಾಡಲಿದ್ದು, ಜನರು ಭಾರೀ ನಿರೀಕ್ಷೆ ಹೊಂದಿದ್ದಾರೆ. ನೀರಾವರಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಎಷ್ಟು ಅನುದಾನ ನೀಡಲಿದ್ದಾರೆ. ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಅನುದಾನ ಸಿಗಲಿದೆ ಅನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರೋಪಯವಾಗಿ ರಸ್ತೆ, ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯ ಕೇಳಿಬಂದಿದೆ. ಇನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಒತ್ತಾಯ ಕೇಳಿಬರುತ್ತಿದ್ದು, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಹಾಗೂ ನಗರಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗಬೇಕೆಂದು ಒತ್ತಾಯ ಕೇಳಿ ಬರುತ್ತಿವೆ.
ಬಜೆಟ್‌ನಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಮಾರುಕಟ್ಟೆ, ಬೆಳೆಗೆ ನಿರ್ದಿಷ್ಟ ಬೆಲೆ, ಕನಿಷ್ಟ ಬೆಂಬಲ ಬೆಲೆ ಹೆಚ್ಚಳ, ಮಣ್ಣಿನ ಫಲವತ್ತತೆ ಹೆಚ್ಚಿಸಲು, ರಾಸಾಯನಿಕ ಗೊಬ್ಬರ, ಹಸಿರೆಲೆ ಗೊಬ್ಬರ, ಬಿತ್ತನೆ ಬೀಜ ಸಮರ್ಪಕ ವಿತರಣೆ, ಪ್ರತಿ ಗ್ರಾಮಕ್ಕೂ ಸಬ್ಸಿಡಿ ದರದಲ್ಲಿ ಒಕ್ಕಣೆ ಯಂತ್ರ ಹಾಗೂ ಎರೆಹುಳ ಗೊಬ್ಬರ ತಯಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಲು ರೈತರು ಆಗ್ರಹಿಸಿದ್ದಾರೆ.