–ಕೋವಿಡ್ ಗೆ ಬಲಿಯಾಗಿದ್ದ ಮಾರುತಿ ಮಾನ್ಪಡೆ
ಬೆಂಗಳೂರು : ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದಾರೆ. ಅವರ ಆಗಲಿಕೆಗೆ ಮಿಡಿಯದ ಹೃದಯಗಳಿಲ್ಲ.ಆದರೆ ಆಗಲಿದ ನಾಯಕನ ಹೆಸರಲ್ಲಿ ರಾಜಕೀಯ ಕೆಸರೆಚಾಟ ನಿಂತಿಲ್ಲ. ಮಾರುತಿ ಮಾನ್ಪಡೆ ಅವರ ಸಾವಿಗೆ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾರಣ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಆರೋಪಿಸಿದ್ದರು.
ಜನ ನಾಯಕ, ರೈತ ನಾಯಕ ಮಾರುತಿ ಮಾನ್ಪಡೆ ಸಾವಿನ ವಿಚಾರದ ಬಗ್ಗೆ ಮಾತನಾಡಿದ್ದ ಕೇಂದ್ರ ಡಿ.ವಿ ಸದಾನಂದಗೌಡ, ಕಾಂಗ್ರೆಸ್ ಪಕ್ಷವು ಕಾಯಿದೆಗಳನ್ನು ವಿರೋಧಿಸಲು ಪ್ರತಿಭಟನೆ ಹಮ್ಮಿಕೊಂಡಿತ್ತು. ಕೆಲ ಬಾಡಿಗೆ ಭಂಟರನ್ನು ಕರೆ ತಂದಿದ್ದರು. ಅಲ್ಲದೆ ಆ ಪ್ರತಿಭಟನೆಯಲ್ಲಿ ಮಾರುತಿ ಮಾನ್ಪಡೆ ಭಾಗಿಯಾಗಿದ್ದರು. ಇದರಿಂದ ಮಾನ್ಪಡೆ ಅವರಿಗೆ ಕೊರೊನಾ ತಗುಲಿ ಸಾವನ್ನಪ್ಪಿದ್ದಾರೆ. ಆದ್ದರಿಂದ ಮಾರುತಿ ಮಾನ್ಪಡೆ ಸಾವಿಗೆ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದ್ದರು.
ಸದಾನಂದಗೌಡರ ಆರೋಪಕ್ಕೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾರುತಿ ಮಾನ್ಪಡೆ ಅವರ ಸಾವಿಗೆ ನಾನು ಮತ್ತು ಡಿ.ಕೆ.ಶಿವಕುಮಾರ್ ಕಾರಣ ಎಂಬ ಬಾಲಿಷ ಹೇಳಿಕೆಯನ್ನು ಸದಾನಂದಗೌಡರ ನೀಡಿದ್ದಾರೆ. ಹಾಗಿದ್ದರೆ ದೇಶದಲ್ಲಿ ಒಂದು ಕಾಲು ಲಕ್ಷ ಜನ ಕೊರೊನಾಕ್ಕೆ ಬಲಿಯಾಗಿದ್ದಾರಲ್ಲಾ ಅದಕ್ಕೆ ಯಾರು ಹೊಣೆ ಎಂದು ಹೇಳುವಿರಾ ಸದಾನಂದ ಗೌಡರೇ? ಎಂದು ಕುಟುಕಿದ್ದಾರೆ.
ಮತ್ತೊಂದೆಡೆ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ದಿನೇಶ್ ಗುಂಡೂರಾವ್, ಹಾಗಿದ್ದರೆ ಬೆಳಗಾವಿ ಮನೆಯಲ್ಲಿದ್ದ ಸುರೇಶ್ ಅಂಗಡಿಯವರನ್ನು ದೆಹಲಿಗೆ ಕರೆಸಿಕೊಂಡು ಅವರಿಗೆ ಕೊರೊನಾ ಬಂದು ಸಾವಿಗೀಡಾದುದಕ್ಕೆ ಮೋದಿ ಕಾರಣ ಎನ್ನಬಹುದೇ ಎಂದು ಸದಾನಂದಗೌಡರ ವಿರುದ್ಧ ಗುಡುಗಿದ್ದಾರೆ.
ಮಾರುತಿ ಮಾನ್ಪಡೆಯವರ ಸಾವಿಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಕಾರಣ ಎಂದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರವರ ಹೇಳಿಕೆಯನ್ನು ಐಕ್ಯಹೋರಾಟ ಸಮಿತಿಯು ಖಂಡಿಸಿದೆ.
ಇಂದು ನಗರದ ಗಾಂಧಿಭವನದಲ್ಲಿ ನಡೆದ ಅಗಲಿದ ಹೋರಾಟಗಾರ ಮಾರುತಿ ಮಾನ್ಪಡೆಯವರಿಗೆ ಶ್ರಧ್ಧಾಂಜಲಿ ಮತ್ತು ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ ಸಮಿತಿಯ ಸಭೆಯಲ್ಲಿ ‘ಕೊರೊನಾ ಸೋಂಕು ಹರಡುತ್ತಿರುವ ಸಮಯದಲ್ಲಿ ರೈತವಿರೋಧಿ, ಬಡಜನ ವಿರೋಧಿ ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದಿರುವ ಸರ್ಕಾರವೇ ಇದಕ್ಕೆ ನೇರ ಹೊಣೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಕೃಷಿ ಬೆಲೆ ನಿಗಧಿ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ದಸಸಂ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು, ಸಿಐಟಿಯು ಕಾರ್ಯದರ್ಶಿ ಕೆ. ಮಾಹತೇಶ ಮುಂತಾದವರು ಭಾಗವಹಿಸಿದ್ದರು.