ಮರಕುಂಬಿ ದಲಿತ ದೌರ್ಜನ್ಯ ಕೇಸ್‌: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 97 ಮಂದಿಗೆ ಕರ್ನಾಟಕ ಹೈಕೋರ್ಟ್‌ ಜಾಮೀನು!

ಧಾರವಾಡ: ಕೊಪ್ಪಳ ಜಿಲ್ಲೆ ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 97 ಮಂದಿಗೆ ಕರ್ನಾಟಕ ಹೈಕೋರ್ಟ್‌ ಧಾರವಾಡ ಪೀಠವು ಜಾಮೀನು ಮಂಜೂರು ಮಾಡಿದೆ.

98 ಜನ ಅಪರಾಧಿಗಳಲ್ಲಿ 97 ಮಂದಿಗೆ ಧಾರವಾಡ ಹೈಕೋರ್ಟ ಪೀಠ ಜಾಮೀನು ನೀಡಿದೆ. ಪ್ರಕರಣದ ಎ1 ಮಂಜುನಾಥ ಜಾಮೀನಿಗೆ ಅರ್ಜಿ ಹಾಕದ ಹಿನ್ನೆಲೆಯಲ್ಲಿ ಆತನಿಗೆ ಜಾಮೀನು​ ಸಿಕ್ಕಿಲ್ಲ. ಪ್ರತಿಯೊಬ್ಬರಿಂದ 50 ಸಾವಿರ ರೂ. ಬೆಲೆಯ ಬಾಂಡ್ ಹಾಗೂ ಒಬ್ಬ ಶ್ಯೂರಿಟಿ ಪಡೆದು ನ್ಯಾಯಾಲಯ ಜಾಮೀನು ನೀಡಿದೆ. ಇನ್ನೂ, ಇದೇ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಆರೋಪಿಗಳಿಗೂ ಸಹ ಜಾಮೀನು ಮಂಜೂರಾಗಿದೆ.

2014 ರ ಆಗಸ್ಟ್ 28 ರಂದು ದಲಿತರ ಗುಡಿಸಲುಗಳಿಗೆ  ಸವರ್ಣಿಯರು ಬೆಂಕಿ ಹಚ್ಚಿದ್ದರು. ಈ ಕುರಿತು 117 ಜನರ ವಿರುದ್ದ ದೂರು ದಾಖಲಾಗಿತ್ತು.  ಇದೆ ಅಕ್ಟೋಬರ್ 28 ರಂದು ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಜೀವಾವದಿ ಶಿಕ್ಷೆ ಘೋಷಣೆ ಮಾಡಿತ್ತು. ತೀರ್ಪು ಪ್ರಶ್ನಿಸಿ ಅಪರಾಧಿಗಳು ಧಾರವಾಡ ಹೈಕೋರ್ಟ ಮೊರೆ ಹೋಗಿದ್ದರು. ಇಂದು (ನ.13) ಹೈಕೋರ್ಟ್​ ದ್ವೀಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿ, ಜಾಮೀನು ನೀಡಿದೆ.

ಅಪರಾಧಿಗಳು ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಹಾಕಿರುವ ಕಾರಣ ಸಹಜವಾಗಿ ಅವರಿಗೆ ಜಾಮೀನು ಸಿಗುತ್ತದೆ. ಹಾಗೆಂದಾಕ್ಷಣ ಕೇಸ್‌ ಬುದ್ದು ಹೋಗುತ್ತದೆ ಎಂದಲ್ಲ. ಕೊಪ್ಪಳದ ನ್ಯಾಯಾದೀಶರು ಸಾಕಷ್ಟು ಅಧ್ಯಯನ ಮಾಡಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರು ಯಾವುದೇ ರಾಜಕೀಯಕ್ಕೆ, ಧಾರ್ಮಕತೆಗೆ ಒಳಗಾಗಿದಿದ್ದರೆ ಹೈಕೋರ್ಟ್‌ನಲ್ಲಿಯೂ ಆರೋಪ ಸಾಭೀತಾಗುತ್ತದೆ ಎಂದು ವಕೀಲರ ಸಂಘಟನೆಯ ಕೋರಿಮಠ ಜನಶಕ್ತಿ ಮೀಡಿಯಾಗೆ ತಿಳಿಸಿದ್ದಾರೆ.

ಇದನ್ನೂ ಓದಿಮರಕುಂಬಿ ಪ್ರಕರಣ : ಪವರ್ ಸಿನಿಮಾ ನೆಪವಷ್ಟೆ, ಹಕ್ಕಿಗಾಗಿ ಹೋರಾಡಿದ್ದಕ್ಕೆ ಬೆಂಕಿ ಹಚ್ಚಿದರು

ಪ್ರಕರಣದ ಹಿನ್ನಲೆ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ 2014 ರಲ್ಲಿ ಕ್ಷೌರದಂಗಡಿಗೆ ಮತ್ತು ಹೋಟೆಲ್‌ನಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಲಾಗಿತ್ತು.  ಇದರ ವಿರುದ್ದ ದಲಿತರು ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಇದಕ್ಕೂ ಮೊದಲು ಸಿಪಿಐಎಂ ನೇತೃತ್ವದಲ್ಲಿ ಭೂಮಿಯ ಹಕ್ಕಿಗಾಗಿ ದಲಿತರು ಹೋರಾಟ ನಡೆಸುತ್ತಿದ್ದರು. ಇವರಿಗೆ ಹಕ್ಕು ನೀಡಿದರೆ ಬಲಗೊಳ್ಳುತ್ತಾರೆ ಎಂಬ ಕಾರಣಕ್ಕಾಗಿ ಸವರ್ಣೀಯರು ದಲಿತರ ಮೇಲೆ ಆಗಾಗ ಜಗಳ, ತಕರಾರು, ಹಲ್ಲೆ ನಡೆಸುತ್ತಿದ್ದರು.  ಗಂಗವಾತಿಯ ಶಿವ ಟಾಕೀಜಿನಲ್ಲಿ ನಡೆದ ಗಲಾಟೆಯನ್ನು ನೆಪವಾಗಿಸಿಕೊಂಡು ಸವರ್ಣೀಯರು ದಲಿತರ ಮನೆಗೆ ಬೆಂಕಿ ಹಚ್ಚಿದ್ದರು. ದಲಿತರ ಮೇಲೆ ಇಟ್ಟಿಗೆ ಹಾಗೂ ಕಲ್ಲು ತೂರಾಟ ನಡೆಸಲಾಗಿತ್ತು, ಈ ವೇಳೆ ಬಹಳಷ್ಟು ಮಂದಿಗೆ ಗಂಭೀರ ಗಾಯಗಳಾಗಿದ್ದವು, ಭೀಮೇಶಪ್ಪ ನೀಡಿದ ದೂರಿನ ಮೇಲೆ 96 ಜನ ಹಾಗೂ ವಿಡಿಯೋ ಆಧರಿಸಿ ಪೊಲೀಸರು 21 ಜನರ ಮೇಲೆ ಸ್ವಯಂ ದೂರು ದಾಖಲಿಸಿದ್ದರು.

ಕೆಲವರ ಹೆಸರು ಪುನರಾವರ್ತನೆಯಾಗಿದೆ ಎಂದು ಚಾರ್ಜ್‌ ಶೀಟ್‌ ಸಲ್ಲಿಸುವ ವೇಳೆ 117 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿನ ಆರೋಪಿಗಳಲ್ಲಿ ಕೆಲವರು ಮೃತಪಟ್ಟಿದ್ದಾರೆ.  ಹೀಗಾಗಿ, 101 ಆರೋಪಿಗಳ ವಿರುದ್ಧ ಅಪರಾಧ ಸಾಬೀತಾದ ಹಿನ್ನಲೆ ಕೊಪ್ಪಳ ನ್ಯಾಯಾಲಯದಿಂದ ಶಿಕ್ಷೆಯ ಆದೇಶ ಹೊರ ಬಿದ್ದಿತ್ತು. ಕಳೆದ ಅಕ್ಟೋಬರ್ 28 ರಂದು ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಜೀವಾವದಿ ಶಿಕ್ಷೆ ಘೋಷಣೆ ಮಾಡಿತ್ತು.

ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿನಡೆದ ಜಾತಿ ಸಂಘರ್ಷ ಪ್ರಕರಣದಲ್ಲಿ 5 ವರ್ಷ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬರು ಕೋರ್ಟ್‌ ತೀರ್ಪು ಬೆನ್ನಲ್ಲೇ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ರಾಮಣ್ಣ ಭೋವಿ(30) ಮೃತರು. ಇವರಿಗೆ 5 ವರ್ಷ ಜೈಲು ಹಾಗೂ ದಂಢ ವಿಧಿಸಿ ಕೊಪ್ಪಳ ನ್ಯಾಯಾಲಯ ಆದೇಶ ನೀಡಿತ್ತು. ಈ ತೀರ್ಪು ವಿವರ ಹೊರಬೀಳುತ್ತಿದ್ದಂತೆ ಅಪರಾಧಿ ರಾಮಣ್ಣ ಬೋವಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ಈ ಅಪರಾಧಿ ಎಚ್‌ಐವಿ ಸೋಂಕಿತನಾಗಿದ್ದ. ಅಸ್ವಸ್ಥನಾದ ಈತನನ್ನು ಪೊಲೀಸರು ಹಾಗೂ ಜೈಲಾಧಿಕಾರಿಗಳು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಈ ಪ್ರಕರಣದಲ್ಲಿ11 ಜನ ತೀರ್ಪು ಬರುವ ಪೂರ್ವದಲ್ಲಿಯೇ ಮೃತಪಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *