ಜೈಪುರ: ರಾಜಸ್ಥಾನದಾದ್ಯಂತ ಇಂದು ಸಂಭವಿಸಿದ ಹಲವು ರಸ್ತೆ ಅಪಘಾತಗಳಲ್ಲಿ ಐದು ಸಾವಾಗಿದ್ದು, 25 ಜನರು ಗಾಯಗೊಂಡಿದ್ದಾರೆ. ದೌಸಾ ಮತ್ತು ಜೈಪುರ ಜಿಲ್ಲೆಗಳಾದ್ಯಂತ ರಸ್ತೆ ಅಪಘಾತಗಳು ಸಂಭವಿಸಿದ್ದು, ಪೊಲೀಸರು ಅಪಘಾತಗಳ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.
ಮೊದಲ ಅಪಘಾತವು ದೌಸಾದ ಬಲಾಹೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಟ್ರಕ್ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು 18 ವರ್ಷದ ಪೂಜಾ ಬೈರ್ವಾ ಮತ್ತು ಆಕೆಯ 16 ವರ್ಷದ ಸಹೋದರ ರೋಶನ್ ಬೈರ್ವಾ ಸಾವನ್ನಪ್ಪಿದ್ದಾರೆ. ಆಘಾತಕಾರಿ ವಿಚಾರವೆಂದರೆ ಒಂದೇ ಬೈಕ್‌ನಲ್ಲಿ ನಾಲ್ಕು ಜನರು ಪ್ರಯಾಣ ಮಾಡುತ್ತಿದ್ದರು. ಮೋಟಾರ್ ಸೈಕಲ್ ಮಾಂದಾವರ ಕಡೆಗೆ ಹೋಗುತ್ತಿದ್ದಾಗ ಪಾಟೋಲಿ ಗ್ರಾಮದ ಬಳಿ ಲಾರಿ ಡಿಕ್ಕಿ ಹೊಡೆದಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಅವರ ತಂದೆ ಮಹೇಶ್ ಬೈರ್ವಾ ಮತ್ತು ಇನ್ನೊಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ, ಮಹಾಕುಂಭ ಮೇಳದಿಂದ ಹನುಮಾನ್‌ಗಢಕ್ಕೆ ಪ್ರಯಾಣಿಸುತ್ತಿದ್ದ ಸ್ಲೀಪರ್ ಬಸ್ ಪೀಪಲ್ಖೇಡ ಗ್ರಾಮದ ಬಳಿ ಪಲ್ಟಿ ಹೊಡೆದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತರನ್ನು 50 ವರ್ಷದ ಸುಂದರ್ ದೇವಿ ಜಾಟ್ ಮತ್ತು 65 ವರ್ಷದ ಭವಾರಿ ದೇವಿ ಶರ್ಮಾ ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಹದಿನಾಲ್ಕು ಮಂದಿ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.
ಮೂರನೇ ಅಪಘಾತವು ಜೈಪುರ-ಬಿಕಾನೇರ್ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸಂಭವಿಸಿದೆ. ಚೋಮು ಪ್ರದೇಶದ ವೀರ್ ಹನುಮಾನ್ ಮಾರ್ಗದ ಬಳಿ ಶಾಲಾ ಬಸ್ ಸೇತುವೆಯಿಂದ ಬಿದ್ದಿದೆ. ಬಸ್ ಅಪಘಾತದಲ್ಲಿ 12 ನೇ ತರಗತಿಯ ವಿದ್ಯಾರ್ಥಿ ಕೋಮಲ್ ದಿಯೋರಾ ಸಾವನ್ನಪ್ಪಿದ್ದಾರೆ. ಇನ್ನು ಒಂಬತ್ತು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.