ಮಂತ್ರಿಗಳ-ಶಾಸಕರ ಸಂಬಳ-ಭತ್ಯೆಗಳ ತಿದ್ದುಪಡಿ ವಿಧೇಯಕಕ್ಕೆ ಎಸ್‌ಎಫ್‌ಐ ವಿರೋಧ

ಬೆಂಗಳೂರು: ಪ್ರಸಕ್ತ ವಿಧಾನಸಭೆ ಅಧಿವೇಶನದಲ್ಲಿ ಸಂಬಳ-ಭತ್ಯೆಗಳ ತಿದ್ದಪಡಿ(2022) ಅಂಗೀಕಾರವಾಗಿದ್ದು, ಪ್ರಸ್ತುತ ಜನತೆಯಲ್ಲಿ ಸಂಕಷ್ಟಗಳು ಎದುರಾಗಿದ್ದರೂ ತಮ್ಮ ಶಾಸಕರುಗಳು ವೇತನ-ಭತ್ಯೆಗಳನ್ನು ಹೆಚ್ಚಿಸಿಕೊಂಡಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ) ರಾಜ್ಯ ಅಧ್ಯಕ್ಷ ಅಮರೇಶ ಕಡಗದ ವಿರೋಧ ವ್ಯಕ್ತಪಡಿಸಿದ್ದಾರೆ.

ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಎಫ್‌ಐ ಸಂಘಟನೆಯು, ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್ ಮತ್ತು ರೈತರ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ಪಕ್ಷ ಸೇರಿದಂತೆ ಎಲ್ಲಾ ಪಕ್ಷದ ಶಾಸಕರು, ಸರಕಾರದ ಸಚಿವರು, ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರುಗಳ ವೇತನ ಭತ್ಯೆ ಮತ್ತು ಮನೆ ಬಾಡಿಗೆ, ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹೋಗುವ ಕಾರ್ಯಕ್ಕೆ ಪೆಟ್ರೋಲ್ ಖರ್ಚು, ಆಪ್ತ ಸಹಾಯಕರ ವೇತನ ಸೇರಿದಂತೆ ಈಗಿರುವ ವೇತನದ ಜೊತೆಗೆ ಶೇಕಡಾ ಐವತ್ತರಷ್ಟು ಏರಿಕೆಯಾಗಿದೆ. ಇದರಿಂದ ಇವರೆಲ್ಲರಿಗೂ ಪ್ರತಿ ತಿಂಗಳು ಲಕ್ಷ-ಲಕ್ಷ ಹಣ ಜನರ ತೆರಿಗೆಯಿಂದ ವ್ಯಯವಾಗುತ್ತಿರುವುದನ್ನು ಖಂಡಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಬಹುತೇಕ ಸರಕಾರಿ ಶಾಲಾ-ಕಾಲೇಜು ವಸತಿ ನಿಲಯಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲ. ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರು, ಶಿಕ್ಷಕರು ಇಲ್ಲ.  ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ಶೌಚಾಲಯಗಳು ಇಲ್ಲ, ವಿದ್ಯಾರ್ಥಿ ವೇತನ ಸಿಗುತ್ತಿಲ್ಲ, ರಾಜ್ಯದ ಕನ್ನಡ ಭಾಷೆಗಾಗಿ ಇರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸುಮಾರು 36 ತಿಂಗಳಿಂದ ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬರದ ಕಾರಣ ಸಂಶೋಧನ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನೂ ಬಹುತೇಕ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗಿಲ್ಲ. ವಿದ್ಯಾರ್ಥಿಗಳು ಬೀದಿಗಳಿದು ಹೋರಾಟ ಮಾಡುತ್ತಿದ್ದಾರೆ. ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಸರಕಾರವು ಇವೆಲ್ಲವೂಗಳ ಬಗ್ಗೆ ಗಂಭಿರವಾಗಿ ಪರಿಗಣಿಸದ ತಮ್ಮ ವಯುಕ್ತಿಕ ಅನುಕೂಲಕ್ಕೆ ಪ್ರತಿ ತಿಂಗಳು ಸುಮಾರು 4 ಲಕ್ಷದಿಂದ 6 ಲಕ್ಷದವರೆಗೂ ಶಾಸಕರು, ಸಚಿವರು ವೇತನವನ್ನು ಹೆಚ್ಚಳ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿ ವಿರೋಧಿ-ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಅಮರೇಶ ಕಡಗದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕತೆಯ ಹೊಡೆತದಿಂದ ಜನರು ಚೇತರಿಸಿಕೊಂಡಿಲ್ಲ. ಅಲ್ಲದೆ, ಇತ್ತೀಚೆಗೆ ಅಕಾಲಿಕ ಮಳೆಯಿಂದಾಗಿ ರಾಜ್ಯದ ಬಹುತೇಕ ರೈತರಿಗೆ ಬೆಳೆ ನಷ್ಟವಾಗಿದೆ. ಬೆಳೆ ವಿಮೆ ಪರಿಹಾರವನ್ನು ಸರಕಾರದ ವತಿಯಿಂದ ಸಮರ್ಪಕವಾಗಿ ಎಲ್ಲಾ ರೈತರಿಗೂ ತಲುಪದೆ ಇರುವ ಸಂದರ್ಭದಲ್ಲಿ ಮೂರು ಪಕ್ಷದ ಶಾಸಕರುಗಳು ವಿಧಾನಸಭೆಯಲ್ಲಿ ಮಂಡಿಸಿದ ತಿದ್ದುಪಡಿ ವಿಧೇಯಕವನ್ನು ಯಾರು ವಿರೋಧ ಮಾಡದೆ ಒಪ್ಪಿಕೊಂಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಇವರೆಲ್ಲವೂ ತಮ್ಮ ಸ್ವಾರ್ಥಕ್ಕಾಗಿ ಆಡಳಿತ ನಡೆಸಲು ಜನರಿಗೆ ಮೋಸ ಮಾಡುತ್ತಾ, ಮೊಸಳೆ ಕಣ್ಣೀರು ಹಾಕುತ್ತಾರೆ ರಾಜಕೀಯ ಉದ್ದೇಶಕ್ಕಾಗಿ ಜನರ ದಾರಿಯನ್ನು ದಿಕ್ಕುತಪ್ಪಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಧೇಯಕವನ್ನು ಪಾಸು ಮಾಡಿಕೊಳ್ಳುವ ಇವರು ನಿಜವಾದ ಜನಪ್ರತಿನಿಧಿಗಳೇ, ಜನರ ಸೇವಕರೇ ಎಂದು ಅಮರೇಶ ಕಡಗದ ಪ್ರಶ್ನೆ ಮಾಡಿದ್ದಾರೆ.

ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯದ ವಿದ್ಯಾರ್ಥಿಗಳ, ರೈತರ, ಕಾರ್ಮಿಕರ, ಅನುಕೂಲಕ್ಕಾಗಿ ಅನೇಕ ವಿಷಯಗಳನ್ನು ಚರ್ಚೆ ಮಾಡುವ ಮೂಲಕ ವಿಧೇಯಕಗಳನ್ನು ಮಂಡಿಸಬಹುದಾಗಿತ್ತು. ಅದು ಬಿಟ್ಟು ತಮ್ಮ-ತಮ್ಮ ಸ್ವಾರ್ಥಕ್ಕಾಗಿ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಿರುವುದನ್ನು  ಎಸ್‌ಎಫ್‌ಐ ಸಂಘಟನೆ ಖಂಡಿಸಿದೆ.

Donate Janashakthi Media

Leave a Reply

Your email address will not be published. Required fields are marked *