ಬೆಂಗಳೂರು: ‘ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರದ ಮಂತ್ರಿಗಳಿಗೆ ಬೆಡ್ ಸಿಗುತ್ತಿಲ್ಲ. ಇದೇ ರೀತಿ ಮುಂದುವರೆದರೆ ಸಾಮಾನ್ಯರ ಪರಿಸ್ಥಿತಿ ಹೇಗಾಗಬೇಕು ಎಂದು ಕಾಂಗ್ರೆಸ್ ಸರಕಾರವನ್ನು ಟೀಕಿಸಿದೆ.
ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ ‘ಸಚಿವರಾದ ಎಂಟಿಬಿ ನಾಗರಾಜ್ ಅವರು ತಮಗೇ ಬೆಡ್ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಮಾಧುಸ್ವಾಮಿ ಪ್ರಭಾವಕ್ಕೂ ಬೆಡ್ ಸಿಗಲಿಲ್ಲ. ಮಂತ್ರಿಗಳಿಗೆ ಹೀಗಾದರೆ ಜನ ಸಾಮಾನ್ಯರ ಸ್ಥಿತಿ ಇನ್ನೂ ಭೀಕರ’ ಎಂದು ಸರ್ಕಾರದ ವಿರುದ್ಧ ಗಂಭೀರವಾದ ಆರೋಪ ಮಾಡಿದೆ.
ಇದನ್ನು ಓದಿ: ಸಾಲುಗಟ್ಟಿ ನಿಂತಿರುವ ಕೋವಿಡ್ ಮೃತದೇಹಗಳು : ಅಂತ್ಯಸಂಸ್ಕಾರಕ್ಕೆ ಇನ್‌ಫ್ಲೂಯೆನ್ಸ್
‘ಕಳೆದ ವರ್ಷದ 10,000 ಬೆಡ್‌ಗಳ ಬಿಐಇಸಿ ಕೋವಿಡ್ ಸೆಂಟರ್ ಎಲ್ಲಿ ಹೋಯ್ತು? ಎಷ್ಟು ಕೋಟಿ ಹಣ ವ್ಯರ್ಥ? ಎಷ್ಟು ಲೂಟಿ ಹೊಡೆದಿದ್ದೀರಿ ಎಂದು ಪ್ರಶ್ನಿಸಿದ ಕಾಂಗ್ರೆಸ್ ಇಷ್ಟೆಲ್ಲ ಸಮಸ್ಯೆ ಇದ್ದರೂ ಅದರ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತುಟಿ ಬಿಚ್ಚುತ್ತಿಲ್ಲವೇಕೆ? ಎಂದು ಕಾಂಗ್ರೆಸ್ ಕೇಳಿದೆ.
ಪೂರ್ವ ತಯಾರಿ ಇಲ್ಲದೆ ಏಕಾಏಕಿಯಾಗಿ ಲಾಕ್‌ಡೌನ್ ಜಾರಿ ಮಾಡಿದ ಪರಿಣಾಮವಾಗಿ ಕೋವಿಡ್ ಸೋಂಕು ನಿಯಂತ್ರಿಸುವ ಬದಲು ಇನ್ನಷ್ಟು ಹಬ್ಬಿಸಲು ಕಾರಣವಾಗಲಿದೆ. ಹೆಚ್ಚುವರಿಯಾಗಿ ಬಿಎಂಟಿಸಿ ಬಸ್‌ಗಳನ್ನು ಉಪಯೋಗಿಸಿಕೊಂಡು 50% ನಿಯಮ ಪಾಲನೆಯಲ್ಲಿ ಸಾರಿಗೆ ವ್ಯವಸ್ಥೆ ನಿರ್ಮಿಸಬಹುದಿತ್ತು. ಆದರೆ ಸರ್ಕಾರ ಕಂಬಳಿ ಹೊದ್ದು ಮಲಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕೆ ಮಾಡಿದೆ.
ಇದನ್ನು ಓದಿ: ಐಸಿಯು ಹಾಸಿಗೆ ಕೊರತೆ ಇರುವುದು ನಿಜ : ಗೌರವ ಗುಪ್ತಾ
‘ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಹಳ್ಳಿಗಳಿಗೆ ತೆರಳಿದವರಿಗೆ ಕಡ್ಡಾಯ ಕ್ವಾರಂಟೈನ್ ಹಾಗೂ ಸೋಂಕು ಪರೀಕ್ಷೆ ನಿಯಮ ರೂಪಿಸಿಲ್ಲ. ನಗರಗಳಲ್ಲಿ, ಕಿಕ್ಕಿರಿದು ತುಂಬಿದ ಬಸ್ಸುಗಳಲ್ಲಿ ಅಂಟಿದ ಸೋಂಕು ಹಳ್ಳಿ ಹಳ್ಳಿಗಳಿಗೆ ತಲುಪಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸೋಂಕನ್ನು ರಾಜ್ಯದಾದ್ಯಂತ ಹಬ್ಬಿಸುವ ಹರಕೆಯನ್ನು ಯಾವ ದೇವರಿಗೆ ಹೊತ್ತಿದ್ದೀರಿ?’ ಎಂದು ಕಾಂಗ್ರೆಸ್ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರನ್ನು ಪ್ರಶ್ನೆಸಿದೆ.