ಮಂಡ್ಯ: ಮನ್‌ಮುಲ್ ಒಕ್ಕೂಟದಿಂದ ನಂದಿನಿ ಪನ್ನೀರ್ ನಿಪ್ಪಟ್ಟು ಹಾಗೂ ನಂದಿನಿ ಸ್ಪೆಷಲ್ ಹಾಲಿನ ಬರ್ಫಿ ಎಂಬ ಎರಡು ನೂತನ ಉತ್ಪನ್ನಗಳನ್ನು ಶುಕ್ರವಾರ ಆಗಸ್ಟ್ 25 ರಂದು ಮಾರುಕಟ್ಟೆಗೆ ಪ್ರವೇಶಿಸಿವೆ.
ಮಂಡ್ಯ ಜಿಲ್ಲಾಹಾಲು ಒಕ್ಕೂಟ (ಮನ್‌ಮುಲ್) ಕಳೆದ ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಖೋವಾ ಲಾಡು ಮತ್ತು ಬೆಲ್ಲದ ಬರ್ಫಿಯನ್ನು ಬಿಡುಗಡೆ ಮಾಡಿತ್ತು. ಈ ವರ್ಷ ಹೊಸದಾಗಿ ಮತ್ತೆರಡು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಮನ್‌ಮುಲ್‌ನ ಡೇರಿ ತಜ್ಞರೇ ಸಿದ್ಧಪಡಿಸಿರುವ ಪನ್ನೀರ್ ನಿಪ್ಪಟ್ಟು ಮತ್ತು ಸ್ಪೆಷಲ್ ಹಾಲಿನ ಬರ್ಫಿ ರುಚಿಯನ್ನು ಗ್ರಾಹಕರು ಸವಿಯಬಹುದಾಗಿದೆ.
ರಾಜ್ಯದಲ್ಲೇ ಹೆಚ್ಚು ಹಾಲು ಸಂಗ್ರಹಿಸುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಡ್ಯದ ಮನ್‌ಮುಲ್, ಈವರೆಗೆ ಮನ್‌ಮುಲ್‌ನಲ್ಲಿ ಬೆಣ್ಣೆ, ತುಪ್ಪ, ಖೋವಾ, ಪನ್ನೀರ್, ಹಾಲಿನ ಪುಡಿ, ಮೊಸರು, ಮಜ್ಜಿಗೆ ತಯಾರಿಸಲಾಗುತ್ತಿದೆ. ಕಳೆದ ವರ್ಷ ಖೋವಾ ಲಾಡು, ಬೆಲ್ಲದ ಬರ್ಫಿಯನ್ನು ಬಿಡುಗಡೆ ಮಾಡಿತ್ತು. ಈಗ ನಂದಿನಿ ಸಿಹಿ ಉತ್ಪನ್ನಗಳ ಪಟ್ಟಿಗೆ ಮತ್ತೆರಡು ಸಿಹಿ ತಿನಿಸುಗಳನ್ನು ಕೊಡುಗೆಯಾಗಿ ನೀಡಿದೆ.
ಈ ಪನ್ನೀರ್ ನಿಪ್ಪಟ್ಟು, ಪ್ರಥಮ ಬಾರಿಗೆ ನಂದಿನಿ ಪನ್ನೀರ್ ಬಳಸಿ ತಯಾರಿಸಿರುವ ಇದು ವಿಶಿಷ್ಟ ಮಾದರಿಯ ಉತ್ಪನ್ನ. ಇದರಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಬಿ1, ಕಬ್ಬಿಣ, ಕ್ಯಾಲ್ಸಿಯಂ, ರಂಜಕ ಮುಂತಾದ ಪೌಷ್ಟಿಕಾಂಶಗಳನ್ನು ಹೊಂದಿದೆ. ಇದರ ಬಳಕೆ ಅವಧಿಯು 1 ತಿಂಗಳಾಗಿದೆ ಎಂದು ಮನ್‌ಮುಲ್ ತಿಳಿಸಿದೆ.
ಇದನ್ನೂ ಓದಿ:ಮುಕ್ತಮಾರುಕಟ್ಟೆಯ ಸವಾಲುಗಳೂ ನಂದಿನಿಯ ಪ್ರಲಾಪವೂ
ಗ್ರಾಮೀಣ ಭಾಗದ ಜನರು ಮನೆಯಲ್ಲಿ ಮಾಡುವ ನಿಪ್ಪಟ್ಟಿನಂತೆಯೇ ಇರುವ ಇದಕ್ಕೆ ಹೆಚ್ಚುವರಿಯಾಗಿ ಶೇ.50ರಷ್ಟು ಪನ್ನೀರ್ ಸೇರಿಸಿರುವುದು ವಿಶೇಷ. ಒಣಮೆಣಸಿನಕಾಯಿ, ಜೀರಿಗೆ, ಬಿಳಿಎಳ್ಳು, ಉಪ್ಪು, ಪನ್ನೀರ್, ಅಕ್ಕಿಹಿಟ್ಟು, ಉರಿಗಡಲೆ, ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ, ಒಣಕೊಬ್ಬರಿ ಪುಡಿಯನ್ನು ಈ ಪನ್ನೀರ್ ನಿಪ್ಪಟ್ಟು ತಯಾರಿಕೆಯಲ್ಲಿ ಬಳಸಲಾಗಿದೆ ಎಂದು ಮನ್‌ಮುಲ್ ತಿಳಿಸಿದೆ.
ಸ್ಪೆಷಲ್ ಹಾಲಿನ ಬರ್ಫಿಯನ್ನು ಹಾಲಿನ ಪುಡಿ, ತುಪ್ಪ, ಸಕ್ಕರೆ, ಡ್ರೈಫ್ರೂಟ್‌ಗಳನ್ನು ಬಳಸಿ ಸ್ವಾದಿಷ್ಟವಾದ ಸ್ಪೆಷಲ್ ಹಾಲಿನ ಬರ್ಫಿ ತಯಾರಿಸಲಾಗುತ್ತಿದೆ. ಇದು ಕೂಡ ವಿಟಮಿನ್ ಎ, ಬಿ6, ಡಿ, ಕ್ಯಾಲ್ಸಿಯಂ, ಪ್ರೋಟೀನ್ ಮುಂತಾದ ಪೋಷಕಾಂಶಗಳಿವೆ. ರಾಸಾಯನಿಕ ಮುಕ್ತ ಸಿಹಿ ತಿಂಡಿಯಾದ ಇದು ಶಕ್ತಿಯ ಉತ್ತಮ ಮೂಲವಾಗಿದೆ ಎಂದು ಮನ್‌ಮುಲ್ ಹೇಳಿಕೊಂಡಿದೆ. ಪ್ಯಾಕಿಂಗ್ ಮಾಡಿದ ದಿನದಂದು 15 ದಿನಗಳವರೆಗೆ ಇದನ್ನು ಬಳಸಬಹುದು.