ಮಣಿಪುರ ಮುಖ್ಯ ಮಂತ್ರಿ ಹೋಗಲೇ ಬೇಕು- ಸಿಪಿಐ(ಎಂ) ಪೊಲಿಟ್‍ಬ್ಯುರೊ

ನವದೆಹಲಿ : ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರ ಮೇಲೆ ನಡೆದ ಭೀಕರ ದೌರ್ಜನ್ಯ, ವಿವಸ್ತ್ರಗೊಳಿಸಿ  ಮೆರವಣಿಗೆ ಮಾಡಿಸಿದ್ದು ಮತ್ತು ಅವರಲ್ಲಿ ಒಬ್ಬಾಕೆಯ ಮೇಲೆ ಸಾಮೂಹಿಕ ಅತ್ಯಾಚಾರದ ಜೊತೆಗೆ ಆಕೆಯನ್ನು ಉಳಿಸಲು ಯತ್ನಿಸಿದ ಇಬ್ಬರು ಕುಟುಂಬ ಸದಸ್ಯರನ್ನು ಹತ್ಯೆಗೈದಿರುವುದು ದೇಶವನ್ನು ಕೆರಳಿಸಿದೆ. ಘಟನೆ ನಡೆದ ಎರಡು ವಾರಗಳೊಳಗೆ ಸಂತ್ರಸ್ತರ ಕುಟುಂಬಗಳು ಅಪಾರ ಧೈರ್ಯ ತಗೊಂಡು  ಎಫ್‌ಐಆರ್ ದಾಖಲಿಸಿದ್ದರೂ ಬಿಜೆಪಿ ಸರಕಾರದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಸರ್ಕಾರವು  ನೇರವಾಗಿಯೇ ಈ ದುಷ್ಕೃತ್ಯ ಎಸಗಿದ  ದುಷ್ಕರ್ಮಿಗಳಿಗೆ ಅಭಯ ಒದಗಿಸಿದ ದೋಷಿಯಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಎರಡೂವರೆ ತಿಂಗಳಿನಿಂದ ರಾಜ್ಯ ಹೊತ್ತಿ ಉರಿಯುತ್ತಿದೆ, ಆದರೂ ಮುಖ್ಯಮಂತ್ರಿ ಮತ್ತು ಸರ್ಕಾರವನ್ನು ಬಿಜೆಪಿಯ ಉನ್ನತ ನಾಯಕತ್ವ ಮತ್ತು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡೇ ಬಂದಿವೆ. ತಿಂಗಳಾನುಗಟ್ಟಲೆ  ಗಾಢ ಮೌನದ ನಂತರ ಪ್ರಧಾನಿಯವರ ಹೇಳಿಕೆಯು ಈ ಘಟನೆಯನ್ನು, ಮಣಿಪುರದ ಹಿಂಸಾಚಾರದ ಅಗಾಧತೆಯನ್ನು ಮತ್ತು ಮುಖ್ಯಮಂತ್ರಿಯ ಪಕ್ಷಪಾತದ ಪಾತ್ರವನ್ನು ಕ್ಷುಲ್ಲಕಗೊಳಿಸಿದೆ. ಉತ್ತರದಾಯಿತ್ವದ ತತ್ವವನ್ನು ಡಬಲ್ ಎಂಜಿನ್ ಸರ್ಕಾರವು ಆಳವಾಗಿ ಹೂತು ಹಾಕಿದೆ.

ಇದು ಬಿಜೆಪಿಯ `ಉತ್ತಮ ಆಳ್ವಿಕೆ’ಯ ದಾವೆಗೆ ಅತ್ಯಂತ ಜ್ವಲಂತ ವ್ಯಾಖ್ಯಾನವಾಗಿದೆ ಎಂದು  ಟಿಪ್ಪಣಿ ಮಾಡಿರುವ ಪೊಲಿಟ್‍ಬ್ಯರೊ ಮಣಿಪುರದ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. ದೇಶಾದ್ಯಂತ ಪ್ರತಿಭಟನೆಯ ಕಾರ್ಯಾಚರಣೆಗಳಲ್ಲಿ  ಮತ್ತು ಮಣಿಪುರದ ಸಂತ್ರಸ್ತ ಮಹಿಳೆಯರು ಮತ್ತು ಜನರೊಂದಿಗೆ ಸೌಹಾರ್ದ ವ್ಯಕ್ತಪಡಿಸಲು ಈ ಆಗ್ರಹವನ್ನು  ಎತ್ತುವಂತೆ ಅದು ತನ್ನ ಘಟಕಗಳಿಗೆ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *