ಇಪಾಲ್: ಭಾರಿ ಹಿಂಸಾಚಾರದ ಮೂಲಕ ವಿಶ್ವದಲ್ಲಿ ಸುದ್ದಿಯಾಗಿದ್ದ ಮಣಿಪುರ ಇದೀಗ ರಾಜಕೀಯ ಕ್ಷಿಪ್ರ ಕ್ರಾಂತಿಯಿಂದ ಮತ್ತೆ ಸುದ್ದಿಯಾಗಿದೆ. ಮಣಿಪುರ ಮುಖ್ಯಮಂತ್ರಿ ಬಿರೆನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಬಲ್ಲಾ ಭೇಟಿಯಾದ ಬಿರೆನ್ ಸಿಂಗ್ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಮಣಿಪುರ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದಕ್ಕೆ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಕೆಲ ಪ್ರಮುಖ ವಿಷಯಗಳನ್ನು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಈಶಾನ್ಯ ರಾಜ್ಯ ಮೇ 2023 ರಿಂದ ಜನಾಂಗೀಯ ಹಿಂಸಾಚಾರದಿಂದ ನರಳುತ್ತಿದೆ. ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಬಿರೇನ್ ಸಿಂಗ್ ಭೇಟಿಯಾದ ಸ್ವಲ್ಪ ಸಮಯದ ನಂತರ ಇಂಫಾಲ್‌ನಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದಕ್ಕೂ ಮೊದಲು ಸಿಂಗ್ ಅವರು ಬಿಜೆಪಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಶಾಸಕರೊಂದಿಗೆ ಸಿಎಂ ಸೆಕ್ರೆಟರಿಯೇಟ್‌ನಲ್ಲಿ ಸಭೆ ನಡೆಸಿದರು.
ಸಿಂಗ್ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಕಾಂಗ್ರೆಸ್ ಶುಕ್ರವಾರ ಘೋಷಿಸಿತ್ತು. ಇದರ ಬೆನ್ನಲ್ಲೇ ಬಿರೇನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಗಳು ತೀವ್ರ ಕುತುಹೂಲ ಮೂಡಿಸಿವೆ.