ಮಣಿಪುರದಲ್ಲಿ 2 ತಿಂಗಳ ನಂತರ 1-8 ನೇ ತರಗತಿಗಳು ಪುನರಾರಂಭವಾದ ಒಂದೇ ದಿನದಲ್ಲಿ ಘಟನೆ
ಇಂಫಾಲ್: ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯ ಕ್ವಾಕಿಥೆಲ್ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಶಾಲೆಯ ಹೊರಗೆ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ. ಜನಾಂಗೀಯ ಹಿಂಸಾಚಾರ ಪ್ರಾರಂಭವಾದ ಎರಡು ತಿಂಗಳ ನಂತರ ರಾಜ್ಯದಲ್ಲಿ 1 ರಿಂದ 8 ನೇ ತರಗತಿಗಳು ಪುನರಾರಂಭಗೊಂಡಿದ್ದವು. ಇದಾಗಿ ಒಂದೇ ದಿನದಲ್ಲಿ ಲ್ಯಾಂಫೆಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವಾಕಿಥೆಲ್ ಮಾಯಾಯ್ ಕೊಯಿಬಿಯಲ್ಲಿ ಈ ಘಟನೆ ನಡೆದಿದೆ.
ಶಿಶು ನಿಷ್ಠಾ ನಿಕೇತನ ಶಾಲೆಯ ಬಳಿ ಬೆಳಗ್ಗೆ 8 ಗಂಟೆ ಸುಮಾರಿಗೆ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೃತ ಮಹಿಳೆ 57ರ ಆಸುಪಾಸಿನ ವಯಸ್ಸಿನವರಾಗಿದ್ದಾರೆ ಎಂದು ವರದಿಯಾಗಿದೆ. ಮೃತಪಟ್ಟ ಮಹಿಳೆಯ ಗುರುತನ್ನು ಇನ್ನೂ ಅಧಿಕೃತವಾಗಿ ಹೇಳಲಾಗಿಲ್ಲ.
ಇದನ್ನೂ ಓದಿ: ಮಣಿಪುರಕ್ಕೆ ಸಿಪಿಐ(ಎಂ)-ಸಿಪಿಐ ಜಂಟಿ ನಿಯೋಗದ ಸೌಹಾರ್ದ ಭೇಟಿ
ಅದಾಗ್ಯೂ, ಚುರಾಚಂದ್‌ಪುರ ಮೂಲದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯು, ಮೃತಪಟ್ಟ ಮಹಿಳೆ ಝೋ-ಕುಕಿ ಸಮುದಾಯಕ್ಕೆ ಸೇರಿದವರು ಎಂದು ಹೇಳಿಕೊಂಡಿದೆ. ಇಂಫಾಲ್ ಪೂರ್ವ ಜಿಲ್ಲೆಯ ಲ್ಯಾಂಫೆಲ್ ಪ್ರದೇಶದ ಚರ್ಚ್ ಕ್ಯಾಂಪಸ್‌ನಲ್ಲಿ ವಾಸಿಸುತ್ತಿದ್ದ ಮಹಿಳೆಯನ್ನು ‘ಡೊಂಗೈಚಿಂಗ್ ಹ್ಯಾಂಗ್ಜೋ’ ಎಂದು ಗುರುತಿಸಲಾಗಿದೆ. ಮಹಿಳೆಯು ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ಸಂಬಂಧಿಕರೊಬ್ಬರು ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಕೃತ್ಯವನ್ನು ಬಲವಾಗಿ ಖಂಡಿಸಿದ ವೇದಿಕೆಯು ಮಹಿಳೆಯರು, ಮಕ್ಕಳು ಮತ್ತು ಮಾನಸಿಕ ಅಸ್ವಸ್ಥರನ್ನು ಸಹ ಬಹುಸಂಖ್ಯಾತ ಸಮುದಾಯದ “ಜನಾಂಗೀಯ ಹತ್ಯೆಯ ಕಾರ್ಯಕ್ರಮ” ದಿಂದ ಮುಕ್ತಗೊಳಿಸಲಾಗಿಲ್ಲ ಎಂದು ಹೇಳಿದೆ. ಮಹಿಳೆಯ ದೇಹವನ್ನು ಇಂಫಾಲ್‌ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನಗಳ ಶವಾಗಾರದಲ್ಲಿ ಇರಿಸಲಾಗಿದೆ.
ಏತನ್ಮಧ್ಯೆ, ಗುರುವಾರ ಮುಂಜಾನೆ ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಗುಂಡಿನ ಸದ್ದು ಕೇಳಿಸಿದೆ ಎಂದು ವರದಿಯಾಗಿದೆ. ಭದ್ರತಾ ಪಡೆಗಳು ಘರ್ಷಣೆಯನ್ನು ವಿಫಲಗೊಳಿಸಿದ ಕೆಲವೇ ಗಂಟೆಗಳ ನಂತರ ಸ್ವಯಂಚಾಲಿತ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತ ಜನರು ಗ್ರಾಮಸ್ಥರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಣಿಪುರಕ್ಕೆ ಕೈ ಕೊಟ್ಟ ಮೋದಿ
ಬುಧವಾರ ಮಧ್ಯಾಹ್ನ 3.40ರ ಸುಮಾರಿಗೆ ಫೈಲೆಂಗ್ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಸಮೀಪದ ಪ್ರದೇಶಗಳಿಂದ ಸಶಸ್ತ್ರ ಗುಂಪುಗಳು ಪ್ರದೇಶದಲ್ಲಿ ಜಮಾಯಿಸಿದ್ದು, ಉದ್ವಿಗ್ನತೆಯನ್ನು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚುವರಿ ಪಡೆಗಳು ಪ್ರದೇಶವನ್ನು ತಲುಪುವುದನ್ನು ತಡೆಯಲು ಸುಮಾರು 1,000-1,500 ಮಹಿಳೆಯರು ರಸ್ತೆಗಳನ್ನು ತಡೆದಿದ್ದಾರೆ ಎಂದು ವರದಿಯಾಗಿದೆ. ಆದರೆ, ಆ ಪ್ರದೇಶದಲ್ಲಿ ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ನಿಯೋಜಿಸಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.
ಸುಮಾರು 100 ಕಿ.ಮೀ ದೂರದ ಚುರಚಂದಪುರದಲ್ಲಿ ಪ್ರತ್ಯೇಕ ಬಡಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಕುಕಿ ಸಮುದಾಯದ ಜನರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕ ಮೈದಾನದಲ್ಲಿ ಆರಂಭವಾದ ರ‍್ಯಾಲಿ ತುಬಾಂಗ್ ಶಾಂತಿ ಮೈದಾನದವರೆಗೆ ಮುಂದುವರಿಯಿತು. ರ‍್ಯಾಲಿಯಲ್ಲಿ ಸುಮಾರು 4,000 ಜನರು ಭಾಗವಹಿಸಿದ್ದರು, ಹೆಚ್ಚಿನವರು ತಮ್ಮ ಮುಖವನ್ನು ಮರೆಮಾಚುವ ‘ಯುದ್ಧ’ದ ಉಡುಗೆಯಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಸಂಜೆ 7 ಗಂಟೆಯವರೆಗೆ ನಡೆದ ರ‍್ಯಾಲಿಯಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನ ನೀಡುವಂತೆ ಮೈತೇಯಿ ಸಮುದಾಯ ಮೇ 3 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದವು. ಈ ವೇಳೆ ಸಮುದಾಯವು ಆಯೋಜಿಸಿದ್ದ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ಯಲ್ಲಿ ಮಣಿಪುರ ರಾಜ್ಯದಲ್ಲಿ ಹಿಂಸಾತ್ಮಕ ಘರ್ಷಣೆಗಳು ಪ್ರಾರಂಭವಾಗಿತ್ತು.
ಇದನ್ನೂ ಓದಿ: ಮಣಿಪುರ ಬಿಕ್ಕಟ್ಟು -ಕೇಂದ್ರ ಸರ್ಕಾರ ಈಗಲಾದರೂ ಕಣ್ತೆರೆಯಬೇಕಿದೆ
ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ರಾಜ್ಯದಲ್ಲಿ ಸಹಜ ಸ್ಥಿತಿಗೆ ತರಲು ಮಣಿಪುರ ಪೊಲೀಸರಲ್ಲದೆ ಸುಮಾರು 40,000 ಕೇಂದ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.