ಮಣಿಪುರ ಹಿಂಸಾಚಾರ | ಯುವತಿಯರ ಬೆತ್ತಲೆ ಮೆರವಣಿಗೆ; ಸಾಮೂಹಿಕ ಅತ್ಯಾಚಾರ

ಮಣಿಪುರ ಹಿಂಸಾಚಾರದ ತೀವ್ರತೆಗೆ ಬೆಚ್ಚಿಬಿದ್ದ ಜಗತ್ತು, ವ್ಯಾಪಕ ಖಂಡನೆ

ಇಂಫಾಲ್: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ವಿಡಿಯೊ ಬೆಳಕಿಗೆ ಬಂದಿದ್ದು, ಘಟನೆಯು ಎರಡು ತಿಂಗಳು ಹಳೆಯದು ಎಂದು ವರದಿಯಾಗಿದೆ. ಪ್ರಮುಖ ಆರೋಪಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಯನ್ನು ಹೆರಾದಾಸ್ (32) ಎಂದು ಗುರುತಿಸಲಾಗಿದೆ. ವಿಡಿಯೊದಲ್ಲಿ ಆರೋಪಿ ಹಸಿರು ಟಿ-ಶರ್ಟ್ ಧರಿಸಿದ್ದು ಕಂಡು ಬಂದಿದ್ದು, ವೀಡಿಯೊದ ಸಹಾಯದಿಂದ ತೌಬಲ್ ಜಿಲ್ಲೆಯಿಂದ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ವಿಡಿಯೋ ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಮಣಿಪುರ ಹಿಂಸಾಚಾರದ ತೀವ್ರತೆ ವಿಶ್ವವನ್ನೆ ಬೆಚ್ಚಿಬೀಳಿಸಿದೆ. ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಒಂದು ದಿನದ ನಂತರ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಅಮಾನವೀಯ ವೀಡಿಯೊದ ವೈರಲ್ ಆಗುತ್ತಿದ್ದಂತೆ, ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್, ಅಪರಾಧಿಗಳ ವಿರುದ್ಧ ಸರ್ಕಾರವು “ಮರಣ ದಂಡನೆ”ಯನ್ನು ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡೇಟಿಗೆ ಮಹಿಳೆ ಸಾವು

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನಿನ್ನೆ ಕಾಣಿಸಿಕೊಂಡ ದುಃಖಕರವಾದ ವೀಡಿಯೊದಲ್ಲಿ ತೀವ್ರ ಅಗೌರವ ಮತ್ತು ಅಮಾನವೀಯ ಕೃತ್ಯಕ್ಕೆ ಒಳಗಾದ ಇಬ್ಬರು ಮಹಿಳೆಯರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ವೀಡಿಯೋ ಕಾಣಿಸಿಕೊಂಡ ತಕ್ಷಣ ಘಟನೆಯ ಬಗ್ಗೆ ಸ್ವಯಂ ಪ್ರೇರಿತವಾಗಿ ಮಣಿಪುರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಇಂದು ಬೆಳಿಗ್ಗೆ ಪ್ರಕರಣದ ಮೊದಲ ಬಂಧನವನ್ನು ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.

“ಪ್ರಸ್ತುತ ಸಂಪೂರ್ಣ ತನಿಖೆ ನಡೆಯುತ್ತಿದ್ದು, ಮರಣದಂಡನೆಯ ಸಾಧ್ಯತೆಯನ್ನು ಪರಿಗಣಿಸುವುದು ಸೇರಿದಂತೆ ಎಲ್ಲಾ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ನಾವು ಖಚಿತಪಡಿಸುತ್ತೇವೆ. ನಮ್ಮ ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳಿಗೆ ಯಾವುದೇ ಸ್ಥಾನವಿಲ್ಲ ಎಂಬುವುದು ತಿಳಿದಿರಲಿ” ಎಂದು ಬಿರೇನ್ ಸಿಂಗ್‌ ಹೇಳಿದ್ದಾರೆ.

 

ಪೊಲೀಸರು ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ . “ಆರೋಪಿಗಳನ್ನು ಬಂಧಿಸಲು ಸರ್ವಪ್ರಯತ್ನ ನಡೆಸಲಾಗುತ್ತಿದೆ. ಅದಕ್ಕಾಗಿ 12 ತಂಡಗಳನ್ನು ರಚಿಸಲಾಗಿದೆ” ಎಂದು ಮಣಿಪುರ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಫ್ರಾನ್ಸ್‌ ಪ್ರವಾಸದಲ್ಲಿ ಮೋದಿ | ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲಿರುವ EU!

ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಒಂದು ಸಾಮೂಹಿಕ ಅತ್ಯಾಚಾರ

ಪೊಲೀಸ್ ದೂರಿನ ಪ್ರಕಾರ, ಘಟನೆಯ ದಿನ ಸುಮಾರು 800 ರಿಂದ 1,000 ಜನರು ಅತ್ಯಾಧುನಿಕ ಆಯುಧಗಳನ್ನು ಹಿಡಿದುಕೊಂಡು ಬಿ. ಫೈನೋಮ್ ಗ್ರಾಮಕ್ಕೆ ನುಗ್ಗಿ ಆಸ್ತಿಗಳನ್ನು ಧ್ವಂಸಗೊಳಿಸಿ, ದೂಚಿದ್ದು ಮತ್ತು ಮನೆಗಳನ್ನು ಸುಟ್ಟು ಹಾಕಿದ್ದಾರೆ. ದುಷ್ಕರ್ಮಿಗಳು ಮೈತೇಯಿ ಸಂಘಟನೆಗಳ ಸದಸ್ಯರು ಎಂದು ಶಂಕಿಸಲಾಗಿದೆ.

ದಾಳಿಯ ಸಮಯದಲ್ಲಿ, ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಕಾಡಿಗೆ ಓಡಿಹೋಗಿದ್ದರು. ನಂತರ ಅವರನ್ನು ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ತಂಡವು ರಕ್ಷಿಸಿತ್ತು. ಆದರೆ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ಗುಂಪೊಂದು ಅವರನ್ನು ಅಪಹರಿಸಿದೆ.

ಐವರಲ್ಲಿ ಒಬ್ಬ ವ್ಯಕ್ತಿಯನ್ನು ಜನರ ಗುಂಪು ತಕ್ಷಣವೇ ಕೊಂದು ಹಾಕಿದ್ದು, ಮೂವರು ಮಹಿಳೆಯರನ್ನು ಬೆತ್ತಲೆ ಮಾಡಲಾಗಿದೆ. ಅವರಲ್ಲಿ 21 ವರ್ಷದ ಯುವತಿಯನ್ನು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದ್ದು, ಯುವತಿಯ 19 ವರ್ಷದ ಸಹೋದರ ಅದರನ್ನು ತಡೆಯಲು ಯತ್ನಸಿದಾಗ ಅವರನ್ನು ಕೊಲೆ ಮಾಡಲಾಗಿದೆ.

ವಿಡಿಯೊ ಹರಡದಂತೆ ಟ್ವಿಟರ್‌ಗೆ ಆದೇಶಿಸಿದ ಕೇಂದ್ರ ಸರ್ಕಾರ

ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ವೀಡಿಯೊವನ್ನು ಹಂಚಿಕೊಳ್ಳದಂತೆ ಕೇಂದ್ರವೂ ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಿಗೆ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಮಣಿಪುರ : ಶಾಂತಿ ಮತ್ತು ಸಹಜಸ್ಥಿತಿಯ ಮರುಸ್ಥಾಪನೆ ತಕ್ಷಣದ ಗುರಿಯಾಗಬೇಕು

 

Donate Janashakthi Media

Leave a Reply

Your email address will not be published. Required fields are marked *