ಮಣಿಪುರ | ಮತ್ತೆ ಹಿಂಸಾಚಾರ; ಗುಂಡಿನ ಚಕಮಕಿ, ಶಾಲೆಗೆ ಬೆಂಕಿ

13,000ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದು, 239 ಬಂಕರ್‌ಗಳನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿವೆ ಮಣಿಪುರ

ಇಂಫಾಲ್: ಮಣಿಪುರದಲ್ಲಿ ಮತ್ತೆ ಘರ್ಷಣೆ ಆರಂಭವಾಗಿದ್ದು, ಸೋಮವಾರ ಬೆಳಗ್ಗೆ ಚುರಚಂದಪುರ-ಬಿಷ್ಣುಪುರ ಗಡಿಯಲ್ಲಿ ಎರಡು ಕಡೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಚುರಚಂದಪುರದಲ್ಲಿ ಗುಂಪೊಂದು ಶಾಲೆಗೆ ಬೆಂಕಿ ಹಚ್ಚಿದ್ದು, ಈ ಪ್ರದೇಶದಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದ್ದು, ಭಾನುವಾರ ಬೆಳಗಿನ ಜಾವದವರೆಗೂ ಸುದೀರ್ಘ ಗುಂಡಿನ ಚಕಮಕಿ ನಡೆದಿದೆ. ಮರುದಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಭದ್ರತಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಪ್ರಕರಣ:14 ಆರೋಪಿಗಳ ಗುರುತು ಪತ್ತೆ

ಶಾಲೆಗೆ ಬೆಂಕಿ ಹಚ್ಚಿದ್ದರಿಂದ ವಸತಿ ಶಾಲೆಯ ಪುಸ್ತಕಗಳು, ಪೀಠೋಪಕರಣಗಳು ಮತ್ತು ಪಾತ್ರೆಗಳು ಸೇರಿದಂತೆ 1.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ. ಮೇ 3 ರಂದು ರಾಜ್ಯದಲ್ಲಿ ಹಿಂಸಾಚಾರ ಪ್ರಾರಂಭವಾದಾಗಿನಿಂದ ಈ ಕ್ಯಾಂಪಸ್ ನಿರ್ಜನವಾಗಿತ್ತು. ಸುಮಾರು ಎರಡು ವಾರಗಳ ಹಿಂದೆ ದಾಳಿಯ ಭಯದಿಂದ ಕಾವಲುಗಾರ ಮತ್ತು ಅವರ ಕುಟುಂಬ ಸದಸ್ಯರು ಅಲ್ಲಿಂದ ಪರಾರಿಯಾಗಿದ್ದರು.

“ಅದೃಷ್ಟವಶಾತ್, ಕಟ್ಟಡದ ಮೊದಲ ಮಹಡಿಯಲ್ಲಿರುವ ಹಾಸ್ಟೆಲ್‌ನಲ್ಲಿ ಯಾರೂ ಇರಲಿಲ್ಲ. ನಮ್ಮ ಕ್ಯಾಂಪಸ್‌ನ ಬಳಿ ಹಲವಾರು ಮನೆಗಳನ್ನು ಸುಟ್ಟು ಹಾಕಿದ್ದರಿಂದ ನಾವು ದಾಳಿಯನ್ನು ನಿರೀಕ್ಷಿಸುತ್ತಿದ್ದೆವು ”ಎಂದು ಸುಮಾರು 500 ವಿದ್ಯಾರ್ಥಿಗಳನ್ನು ಹೊಂದಿರುವ ಚಿಲ್ಡ್ರನ್ಸ್ ಟ್ರೆಷರ್ ಹೈಸ್ಕೂಲ್ ಸಂಸ್ಥಾಪಕ ಮತ್ತು ಮಾಲೀಕ ಲಿಯಾನ್ ಖೋ ಥಮ್ಗ್ ವೈಫೇಯ್ ಹೇಳಿದ್ದಾರೆ.

ಈ ವರೆಗೆ 13,000ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದು, 239 ಬಂಕರ್‌ಗಳನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿವೆ. ಸುಮಾರು ಒಂದೂವರೆ ಕೋಟಿ ರೂಪಾಯಿಗಳಿಗೂ ಅಧಿಕ ಹಾನಿಯಾಗಿದೆ ಎಂದು ಶಾಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ಕುಕಿ ಮಹಿಳೆಯರನ್ನು ಬೀದಿಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 14 ಜನರನ್ನು ಗುರುತಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.

ವಿಡಿಯೊ ನೋಡಿ: ಮಣಿಪುರ ಧಗಧಗಿಸುತ್ತಿರುವುದೇಕೆ? ಕೈ ಕೊಟ್ಟ ಡಬಲ್‌ ಇಂಜಿನ್‌ ಸರ್ಕಾರ! Janashakthi Media

Donate Janashakthi Media

Leave a Reply

Your email address will not be published. Required fields are marked *