ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಮೂವರು ಸಾವು, ಇಬ್ಬರಿಗೆ ಗಾಯ

ಇಂಫಾಲ: ಮಣಿಪುರದಲ್ಲಿ ಸ್ವಲ್ಪ ಸಮಯದ ನಂತರ ಶುಕ್ರವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಇಂದು ಬೆಳಗಿನ ಜಾವ ಕಾಂಗ್‌ಪೋಕ್ಪಿ ಜಿಲ್ಲೆ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಗಡಿಯಲ್ಲಿರುವ ಖೋಕೆನ್ ಗ್ರಾಮದಲ್ಲಿ ಹಿಂಸಾಚಾರ ನಡೆದಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಾವೇ ಖುದ್ದಾಗಿ ಮಣಿಪುರಕ್ಕೆ ಭೇಟಿ ನೀಡಿ ಶಾಂತಿ ಮಾತುಕತೆಗೆ ಚಾಲನೆ ನೀಡಿದ್ದರು. ಗಲಭೆಕೋರರಿಗೆ ಕಠಿಣ ಸಂದೇಶವನ್ನೂ ರವಾನಿಸಿದ್ದರು. ಅದಾದ ಮೇಲೂ ಹಿಂಸಾಚಾರಗಳು ವರದಿಯಾಗುತ್ತಲೇ ಇವೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆಯಲು ಸ್ಥಳದಲ್ಲಿ ಸೇನಾ ಯೋಧರನ್ನು ನಿಯೋಜಿಸಲಾಗಿದೆ.

ಈ ಘಟನೆ ಪಕ್ಕಾ ಸಿನಿಮಾ ಮಾದರಿಯಲ್ಲಿ ನಡೆದಿದೆ. ಯೋಧರ ವೇಷಧರಿಸಿ ಬಂದ ಒಳನುಸುಳುಕೋರರು, ಯೋಧರ ಮಾದರಿಯ ವಾಹನವನ್ನೇ ಬಳಸಿದ್ದಾರೆ. ಸ್ಥಳಕ್ಕೆ ಬಂದು ತಮ್ಮ ಸ್ವಯಂಚಾಲಿತ ಬಂದೂಕಿನಿಂದ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಟಿಎಲ್‌ಎಫ್ ಬುಡಕಟ್ಟು ಸಂಘಟನೆ, ಒಳ ನುಸುಳಕೋರರು ಕಾನೂನಿಗೆ ತೋರಿಸಿರುವ ಅಗೌರವವಿದು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು, ಅಮಿತ್‌ ಶಾ ಕರೆ ನೀಡಿರುವ ಶಾಂತಿ ಮಾತುಕತೆಗೆ ಇದರಿಂದ ಧಕ್ಕೆಯಾಗಿದೆ ಎಂದು ಹೇಳಿದೆ. ಮಣಿಪುರದ ಇನ್ನೊಂದೆರಡು ಜಿಲ್ಲೆಗಳಲ್ಲಿ ಹಿಂಸಾಚಾರ, ಮನೆಗಳಿಗೆ ಬೆಂಕಿ ಹಾಕುವ ಕೃತ್ಯಗಳು ನಡೆದಿವೆ ಹೇಳಲಾಗುತ್ತಿದೆಯಾದರೂ, ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.

ಮಣಿಪುರದ ದಂಗೆಗಳನ್ನು ತನಿಖೆ ಮಾಡಲು ಸಿಬಿಐ ವಿಶೇಷ ತನಿಖಾ ಪಡೆಯನ್ನು ರಚಿಸಿದೆ. ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಣಿಪುರದ ದಂಗೆಯನ್ನು ಸಿಬಿಐ ತನಿಖೆ ಮಾಡಲಿದೆ ಎಂದು ಹೇಳಿದ್ದಾರೆ. ಅದರ ಬೆನ್ನಲ್ಲೇ 6 ಪ್ರಕರಣಗಳನ್ನು ಸಿಬಿಐ ತನಿಖೆಗೆ ಕೈಗೆತ್ತಿಕೊಳ್ಳಲಿದೆ. ಐದು ಪ್ರಕರಣಗಳು ಕ್ರಿಮಿನಲ್‌ ಪಿತೂರಿಯ ಹಿನ್ನೆಲೆಯನ್ನು ಹೊಂದಿದ್ದರೆ, ಇನ್ನೊಂದು ಮಾಮೂಲಿ ಪಿತೂರಿಯಾಗಿದೆ. ಮೇ 3ಕ್ಕೆ ಆ ರಾಜ್ಯದಲ್ಲಿ ಹಿಂಸಾಚಾರ ಶುರುವಾಯಿತು. ಮೈತೇಯಿ ಮತ್ತು ಕುಕಿ ಸಮುದಾಯದವರ ನಡುವಿನ ಬುಡಕಟ್ಟು ಸ್ಥಾನಮಾನದ ಗಲಾಟೆಯಲ್ಲಿ ಈ ಹಿಂಸಾಚಾರ ಸಂಭವಿಸಿದೆ. ಇತ್ತೀಚೆಗೆ ಸತತವಾಗಿ ಕುಕಿ ಸಮುದಾಯದ ಬಂಡುಕೋರರೇ ಹಿಂಸಾತ್ಮಕ ಕೃತ್ಯದಲ್ಲಿ ನಿರತವಾಗಿರುವುದು ಕಂಡುಬಂದಿದೆ.

Donate Janashakthi Media

Leave a Reply

Your email address will not be published. Required fields are marked *