ಇಂಫಾಲ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಏಳು ಜನರು ಸಾವಿಗೀಡಾಗಿದ್ದು, 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.ಸ್ಥಳೀಯರು ಸೆಂಟ್ರಲ್ ಫೋರ್ಸ್‌ನ ಕಾರುಗಳನ್ನು ನಿಲ್ಲಿಸಲು ಆಗ್ರಹಿಸಿದ್ದರಿಂದ ತೌಬಲ್‌ನಲ್ಲಿ ಉದ್ವಿಗ್ನತೆ ಉಂಟಾಗಿದೆ. ಶಂಕಿತ ಕುಕಿ ದಂಗೆಕೋರರು ರಾಜ್ಯದ ರಾಜಧಾನಿ ಇಂಫಾಲ್‌ನಿಂದ 229 ಕಿಮೀ ದೂರದಲ್ಲಿರುವ ಜಿಲ್ಲೆಯ ನುಂಗ್‌ಚಾಪ್ಪಿ ಗ್ರಾಮದ ಮೇಲೆ ದಾಳಿ ಮಾಡಿರುವುದಲ್ಲದೆ, ಯುರೆಂಬಮ್ ಕುಲೇಂದ್ರ ಸಿಂಘಾ ಎಂಬವರನ್ನು ಕೊಂದು ಹಾಕಿದ್ದಾರೆ. ಇದರಿಂದ ಕಳೆದ ಒಂದು ವಾರದಲ್ಲಿ ಆರು ಜನರು ಬಲಿಯಾದಂತಾಗಿದೆ.
ಶಂಕಿತ ಸಶಸ್ತ್ರಧಾರಿಗಳು ಮಣಿಪುರದ ಮೊದಲ ಮುಖ್ಯಮಂತ್ರಿ ಮೈರೆಂಬಮ್ ಕೊಯಿರೆಂಗ್ ಮನೆ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿ, ಆರು ಜನರು ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳು ಪ್ರತಿ ದಾಳಿಯಲ್ಲಿ ಚುರಾಚಂದಪುರ್ ಜಿಲ್ಲೆಯಲ್ಲಿ ಮೂರು ಬಂಕರ್‌ಗಳನ್ನು ನಾಶಪಡಿಸಿದ್ದಾರೆ. ಜತೆಗೆ ಮಿಲಿಟರಿ ಹೆಲಿಕಾಪ್ಟರ್ ಮೂಲಕ ಆಗಸದಿಂದ ಗಸ್ತು ನಡೆಸಲಾಗಿದೆ.
ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ, ಈ ಪ್ರದೇಶದಲ್ಲಿ ನಿಷೇಧಾಜ್ಞೆ ಹೊರಡಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಎರಡು ಸಶಸ್ತ್ರ ಗುಂಪುಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ನಿದ್ದೆಯಲ್ಲಿದ್ದಾಗ ಒಬ್ಬ ವೃದ್ಧನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ನುಂಚಾಪಿ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಉಗ್ರಗಾಮಿಗಳು ಭಾರೀ ಗುಂಡಿನ ಚಕಮಕಿಯಲ್ಲಿ ತೊಡಗಿದ್ದು, ಮೂವರು ಶಂಕಿತ ಕುಕಿ ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ.
‘ರಾಜ್ಯದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರೂ ನಿಯಂತ್ರಣದಲ್ಲಿದೆ. ಇಂದು (ಭಾನುವಾರ) ಯಾವುದೇ ಹೊಸ ಹಿಂಸಾಚಾರ ಘಟನೆಗಳು ವರದಿಯಾಗಿಲ್ಲ. ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತಾ ಪಡೆಗಳ ಸಮನ್ವಯದೊಂದಿಗೆ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅನಧಿಕೃತ ಡ್ರೋನ್ ಹೊಡೆದುರುಳಿಸುವ ಉದ್ದೇಶದಿಂದ ಅಸ್ಸಾಂ ರೈಫಲ್ಸ್ ಇಂಫಾಲ್ ಕಣಿವೆ ಪ್ರದೇಶಗಳಲ್ಲಿ ಆ್ಯಂಟಿ ಡ್ರೋನ್ ಸಿಸ್ಟಮ್ ಅನ್ನು ನಿಯೋಜಿಸಿದೆ ಎಂದು ಅವರು ಹೇಳಿದ್ದಾರೆ.
ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಬಿಷ್ಣುಪುರ ಜಿಲ್ಲೆಯಲ್ಲಿ ಉಗ್ರರು ನಡೆಸಿದ ರಾಕೆಟ್ ದಾಳಿಗೆ ಭದ್ರತಾ ಪಡೆಗಳು ತಿರುಗೇಟು ನೀಡಿದ್ದು, ಚುರ್‌ಚಂದಪುರ ಜಿಲ್ಲೆಯಲ್ಲಿ ಉಗ್ರರಿಗೆ ಸೇರಿದ 3 ಬಂಕರ್‌ಗಳನ್ನು ಸೇನಾಪಡೆಗಳು ಧ್ವಂಸಗೊಳಿಸಿವೆ. ಹಿಂಸಾಚಾರ ಬೆನ್ನಲ್ಲೇ ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
ರಾಜ್ಯಪಾಲರ ಭೇಟಿ ಮಾಡಿದ ಸಿಎಂ
ಏತನ್ಮಧ್ಯೆ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು ಪಕ್ಷದ ಮತ್ತು ಆಡಳಿತಾರೂಢ ಮೈತ್ರಿಕೂಟದ ಘಟಕ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ ಶಾಸಕರ ಜೊತೆ ಶನಿವಾರ ರಾತ್ರಿ ತುರ್ತು ಸಭೆ ನಡೆಸಿದ್ದಾರೆ. ಅಂತೆಯೇ ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಅವರು ಭಾನುವಾರ ಬೆಳಗ್ಗೆ 20ಕ್ಕೂ ಹೆಚ್ಚು ಶಾಸಕರೊಂದಿಗೆ ರಾಜ್ಯಪಾಲ ಎಲ್ ಆಚಾರ್ಯ ಅವರನ್ನು ಭೇಟಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಶಾಸಕರೊಂದಿಗೆ ಸಿಂಗ್ ರಾಜಭವನ ತಲುಪಿದ್ದು, ಸುಮಾರು ಒಂದು ಗಂಟೆ ಸಭೆ ನಡೆದಿದ್ದು, ಬಳಿಕ ರಾಜಭವನದಿಂದ ನಿರ್ಗಮಿಸಿದ್ದಾರೆ. ಸಭೆಯಲ್ಲಿ ಸಭೆಯಲ್ಲಿ ಏನು ಚರ್ಚೆಯಾಗಿದೆ ಎಂಬುದು ತಿಳಿದುಬಂದಿಲ್ಲ.