ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶುಕ್ರವಾರ ಮಧ್ಯ ಪ್ರವೇಶಿಸಿದ್ದು, ಎಲ್ಲ ಜಾತ್ರೆ ವ್ಯಾಪಾರಸ್ಥರಿಗೂ ಸಮಾನ ಅವಕಾಶ ಆಗುವಂತೆ ತುರ್ತಾಗಿ ನಾಳೆಯೇ ಬಹಿರಂಗ ಹರಾಜು ಪ್ರಕ್ರಿಯೆ ನಡೆಸುವಂತೆ ನಗರಪಾಲಿಕೆಗೆ ಆದೇಶ ನೀಡಿದೆ. ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ನಗರದ ಟೌನ್ ಹಾಲ್ ಮುಂಬಾಗ ಪ್ರತಿಭಟನೆ ನಡೆಸಿತ್ತು.
ಮುಸ್ಲಿಂ ವ್ಯಾಪಾರಿಗಳಿಗೆ ಅನ್ಯಾಯ ಆಗಿರುವ ಬಗ್ಗೆ ಅಪರ ಜಿಲ್ಲಾಧಿಕಾರಿ ಜಿ. ಸಂತೋಷ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹಿಂದೂ ಸನಾತನ ಜಾತ್ರೆ ವ್ಯಾಪಾರಸ್ಥರ ಅರ್ಜಿ ಆಧಾರದಲ್ಲಿ ಸಂಘರ್ಷ ನಡೆಯಬಹುದು ಎಂದು ಮುಸ್ಲಿಂ ವ್ಯಾಪಾರಿಗಳಿಗೆ ತಿಳಿಸಿರುವುದನ್ನು ದೇವಸ್ಥಾನದ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಗುತ್ತಿಗೆದಾರರ 20 ಸಾವಿರ ಕೋಟಿ ಬಾಕಿ ಮೊತ್ತ ಬಿಡುಗಡೆಗೆ ಸರ್ಕಾರಕ್ಕೆ 30 ದಿನಗಳ ಗಡುವು ನೀಡಿದ ಡಿ.ಕೆಂಪಣ್ಣ
ಮುಸ್ಲಿಂ ವ್ಯಾಪಾರಿಗಳನ್ನು ಭಯ ಹುಟ್ಟಿಸಿ ವಾಪಸ್ ಕಳುಹಿಸಿರುವ ದೇವಸ್ಥಾನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಅಪರ ಜಿಲ್ಲಾಧಿಕಾರಿಗಳು ಭದ್ರತೆ ಕೊಟ್ಟು ಎಲ್ಲರನ್ನು ಒಳಗೊಳ್ಳುವಂತ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.
ಜಾತ್ರೆ ನಡೆಯುವ ಮಹಾನಗರ ಪಾಲಿಕೆ ಸ್ವಾಧೀನ ಇರುವ ಸಾರ್ವಜನಿಕ ಸ್ಥಳದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಏಲಂ ನಡೆಸಿ ಜಾಗ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ತಡೆಹಿಡಿದಿದೆ. ದೇವಸ್ಥಾನದ ಜಾಗವನ್ನು ಹೊರತುಪಡಿಸಿದ ನಗರಪಾಲಿಕೆ ಜಾಗದಲ್ಲಿ ತುರ್ತು ಟೆಂಡರು ಕರೆದು ನಾಳೆ ಬೆಳಿಗ್ಗೆಯೇ ಬಹಿರಂಗ ಹರಾಜು ಮಾಡಿ ಎಲ್ಲರಿಗೂ ವ್ಯಾಪಾರ ಮಾಡುವಂತಾಗಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾ ನಗರಪಾಲಿಕೆಗೆ ಜಿಲ್ಲಾಡಳಿತ ಆದೇಶ ನೀಡಿದೆ.
ಸಭೆಯು ಅಪರ ಜಿಲ್ಲಾಧಿಕಾರಿ ಜಿ. ಸಂತೋಷ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ನಗರಪಾಲಿಕೆಯ ಉಪ ಆಯುಕ್ತರಾದ (ಕಂದಾಯ) ರೇಖಾ ಶೆಟ್ಟಿ , ಸಹಾಯಕ ಪೊಲೀಸ್ ಆಯುಕ್ತರಾದ ಮಹೇಶ್ ಕುಮಾರ್, ಮಂಗಳಾದೇವಿ ದೇವಸ್ಥಾನದ ಪ್ರತಿನಿಧಿಗಳು, ಬೀದಿಬದಿ ಮತ್ತು ಜಾತ್ರೆ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಸುನಿಲ್ ಕುಮಾರ್ ಬಜಾಲ್, ಬಿ.ಕೆ ಇಮ್ತಿಯಾಝ್, ಹರೀಶ್ ಪೂಜಾರಿ, ಪ್ರವೀಣ್ ಕುಮಾರ್ ಕದ್ರಿ, ರಿಯಾಜ್, ಶಾಫಿ ಬೆಂಗ್ರೆ, ಆಸೀಫ್ ಬಾವ ಉಪಸ್ಥಿತರಿದ್ದರು.
ವಿಡಿಯೊ ನೋಡಿ: “ಸೈಬರ್ ಕಳ್ಳತನ” ಜಾಗೃತ ಗೀತೆ – ಹಾಡಿದವರು : ಚಂದ್ರಿಕಾ ಗಿರೀಶ್Janashakthi Media