ಮಂಗಳೂರು: ಪೋಲಿಸ್ ಇನ್ಸ್ ಪೆಕ್ಟರ್ ಎದುರೇ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ. ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ಬಳಿ ಭಾನುವಾರ ಸಂಜೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಾರ್ ತಡೆದ ಯುವಕರ ಗುಂಪು ಯುವಕ, ಯುವತಿಯರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಸ್ಥಳದಲ್ಲಿದ್ದ ಇನ್ಸ್ ಪೆಕ್ಟರ್ ನೈತಿಕ ಪೊಲೀಸ್ ಗಿರಿ ತಡೆದಿದ್ದಾರೆ ಎಂದು ಹೇಳಲಾಗಿದೆ.
ಕಾರೊಂದಕ್ಕೆ ಗುಂಪೊಂದು ಮುತ್ತಿಗೆ ಹಾಕಿರುವುದು, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೊ ದಲ್ಲಿ ಟ್ರಾಫಿಕ್ ಇನ್ಸ್ಪೆಕ್ಟರ್ ಒಬ್ಬರು ಹಲ್ಲೆ ನಡಿಸಬೇಡಿ ಎಂದು ಮನವಿ ಮಾಡಿದರೂ ಅವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಇಂತಹ ಘಟನೆಗಳು ಮಂಗಳೂರಿನಲ್ಲಿ ದಿನೆ ದಿನೆ ಹೆಚ್ಚಾಗುತ್ತಿದ್ದು ಸಂಘಪರಿವಾರದ ಕಾರ್ಯಕರ್ತರ ಪುಂಡಾಟಕ್ಕೆ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಾನೂನು ವ್ಯವಸ್ಥೆ ಹಾಳಾಗಿದೆಯಾ? ಜನರಿಗೆ ರಕ್ಷಣೆ ಇಲ್ವಾ. ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ನಿಲ್ಲುವುದು ಯಾವಾಗ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಮಂಗಳೂರು ಪ್ರವಾಸಿತಾಣವಾಗಿದ್ದು ತಾಣಗಳನ್ನು ವೀಕ್ಷಿಸಲು ಜನರ ಗುಂಪು ಸಹಜವಾಗಿಯೇ ಬರುತ್ತಿರುತ್ತದೆ. ಈ ರೀತಿಯ ಘಟನೆಗಳು ರಾಜ್ಯಕ್ಕೂ ಹಾಗೂ ಕರಾವಳಿಗೆ ಕೆಟ್ಟ ಹೆಸರು ತರುವ ಘಟನೆಗಳಾಗಿವೆ. ನೈತಿಕ ಪೊಲೀಸ್ ಗಿರಿಗೆ ರಾಜ್ಯ ಸರಕಾರ ಲಗಾಮು ಹಾಕಬೇಕಿದೆ.