ಮಂಗಳೂರು: ಹಿಂದುತ್ವವಾದಿ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರವನ್ನು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ಸಂಬಂಧ ಆರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಲೇಜು ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ವಿದ್ಯಾರ್ಥಿಗಳಾದ ಮರ್ಕಜ್, ಅಬೂಬುಕ್ಕರ್ ಸಿದ್ಧಿಕಿ, ಮಹಮ್ಮದ್ ಹಫೀಜ್, ಪ್ರಜನ್, ಸ್ವಸ್ತಿಕ್ ಮತ್ತು ಗುರುಕಿರಣ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ವಿದ್ಯಾರ್ಥಿಗಳ ನಡುವಿನ ಗಲಾಟೆಯನ್ನು ತಡೆಯಲು ಪೊಲೀಸರು ಮಧ್ಯಪ್ರವೇಶಿಸಿದ್ದರು.
ಸಿಎಫ್‌ಐ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರು ಕಾಲೇಜಿನ ಹೊರಗೆ ಜಮಾಯಿಸಿ ಮುತ್ತಿಗೆ ಹಾಕಲು ಯತ್ನಿಸಿದರು, ಕಾಲೇಜು ಪ್ರಾಂಶುಪಾಲೆ ಅನಸೂಯ ರೈ ಅವರನ್ನು ಅಮಾನತು ಮಾಡಬೇಕು ಹಾಗೂ ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಕಾಲೇಜು ಗೇಟ್ ಬಳಿಯೇ ತಡೆದರು. ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು. ಬಳಿಕ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
ಕಾಲೇಜಿನ ತರಗತಿಯೊಳಗೆ ಸಾವರ್ಕರ್ ಪೋಟೋ ಹಾಕಿದ್ದಕ್ಕಾಗಿ ಕಾಲೇಜು ಪ್ರಾಂಶುಪಾಲರು ಎಬಿವಿಪಿ ಕಾರ್ಯಕರ್ತರಿಂದ ಫೋಟೋ ತೆಗೆಸಿದ್ದಾರೆ. ಈ ವೇಳೆ ಎಬಿವಿಪಿ ಕಾರ್ಯಕರ್ತರು ರಿಫಾಜ್, ಸಿದ್ಧಿಖ್ ಹಾಗೂ ಮರ್ಜುಕ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಎಂಬ ಆರೋಪವಿದೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ʻʻವಿದ್ಯಾರ್ಥಿಗಳ ಎರಡೂ ಗುಂಪುಗಳ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ನಡುವೆ ಮೊದಲು ಮಾತಿನ ಚಕಮಕಿ ನಡೆದಿದೆ. ಮಧ್ಯಾಹ್ನ 1.30ರ ವೇಳೆ ಕೈ-ಕೈ ಮಿಲಾಯಿಸಿದ್ದರೆಂದು ಕಾಲೇಜು ಪ್ರಾಂಶುಪಾಲರು ದೂರು ನೀಡಿದ್ದಾರೆ. ಘರ್ಷಣೆ ಸಂಬಂಧ ಯಾವುದೇ ವಿದ್ಯಾರ್ಥಿಗಳು ದೂರು ನೀಡಿಲ್ಲʼʼ ಎಂದು ಹೇಳಿದರು.