– ನವೀನ್ ಸೂರಿಂಜೆ
ಹೋಂ ಸ್ಟೇಯಲ್ಲಿ ಬರ್ತ್ ಡೇ ಆಚರಿಸುತ್ತಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೇಲೆ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಮುಗಿಬಿದ್ದು, ವಿದ್ಯಾರ್ಥಿನಿಯರ ಬಟ್ಟೆಗಳನ್ನು ಕಿತ್ತೆಸೆದು ಅತ್ಯಾಚಾರಕ್ಕೆ ಯತ್ನಿಸಿದರು ಎಂದು ಸಂತ್ರಸ್ತ ವಿದ್ಯಾರ್ಥಿನಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ.
07.10.2021 ರಂದು ನ್ಯಾಯಾಲಯಕ್ಕೆ ಹಾಜರಾದ ಹೋಂಸ್ಟೇ ದಾಳಿಯ ಸಂತ್ರಸ್ತ ವಿದ್ಯಾರ್ಥಿನಿ ದಾಳಿಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ. ಇದೇ ವಿದ್ಯಾರ್ಥಿನಿಯ ಕೆನ್ನೆಗೆ ಹಿಂದೂ ಜಾಗರಣಾ ವೇದಿಕೆಯ ಸದಸ್ಯ ಜೋರಾಗಿ ಹೊಡೆದಿದ್ದ. ಆಗ ಈ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ದೃಶ್ಯಾವಳಿಗಳು ದೇಶ ವಿದೇಶಗಳಲ್ಲಿ ಸಂಚಲನ ಸೃಷ್ಟಿಸಿ ಜನರು ಮರುಗುವಂತೆ ಮತ್ತು ಆಕ್ರೋಶಪಡುವಂತೆ ಮಾಡಿತ್ತು. ಆ ವಿದ್ಯಾರ್ಥಿನಿ ನ್ಯಾಯಾಲಯದಲ್ಲಿ ಹೇಳಿದ ಸಾಕ್ಷ್ಯದ ಸರಳೀಕೃತ ಬರಹ ರೂಪ ಇಲ್ಲಿದೆ :
2012 ಜುಲೈ 28 ರಂದು ಹೋಂ ಸ್ಟೇ ದಾಳಿ ನಡೆದಾಗ ನಾನು 2 ನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದೆ. ನನ್ನ ಸ್ನೇಹಿತೆಯ ಹುಟ್ಟುಹಬ್ಬವನ್ನು ಪಡೀಲ್ ಬಳಿ ಇದ್ದ ಹೋಂ ಸ್ಟೇ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಆ ದಿನ ನಾನು ಹಾಗೂ ನನ್ನ ಸಹಪಾಠಿಗಳು ಮತ್ತು ಸ್ನೇಹಿತರು ಮಧ್ಯಾಹ್ನ ಸುಮಾರು 2 ರಿಂದ 3 ಗಂಟೆ ನಡುವೆ ಹೋಂ ಸ್ಟೇನಲ್ಲಿ ಸೇರಿದ್ದೆವು. ಆ ದಿನ ಸಂಜೆ 4 ಗಂಟೆಯ ನಂತರ ಗೆಳತಿಯ ಬರ್ತ್ ಡೇ ಕೇಕ್ ಅನ್ನು ಕಟ್ ಮಾಡಲಾಯಿತು.
ಬರ್ತ್ ಡೇ ಕಾರ್ಯಕ್ರಮವನ್ನು ಮುಗಿಸಿಕೊಂಡು ನಾವು ಹೋಂಸ್ಟೇಯಿಂದ ಹೊರಡಲು ಸಿದ್ದತೆ ನಡೆಸುತ್ತಿದ್ದೆವು. ಅದೇ ಸಮಯದಲ್ಲಿ ಸುಮಾರು 45 ರಿಂದ 50 ಜನ ಹೋಂ ಸ್ಟೇ ಬಳಿ ಬಂದು ಕೂಗಾಡಿಕೊಂಡು ಹೋಂ ಸ್ಟೇ ನ ಎಲ್ಲಾ ಬಾಗಿಲುಗಳ ಮೂಲಕ ಒಳಪ್ರವೇಶಿಸಿದರು. ಅಲ್ಲದೇ, ಒಳ ಬಂದವರೇ ನಮ್ಮ ಮೇಲೆ ಹಲ್ಲೆ ಮಾಡಿದರು. ನಾನು ಬಾಲ್ಕನಿಯಲ್ಲಿದ್ದೆ. ದಾಳಿಕೋರರ ಪೈಕಿ ಇಬ್ಬರು ವ್ಯಕ್ತಿಗಳು ನನ್ನನ್ನು ಹಿಡಿದುಕೊಂಡು ಬಂದು ರೂಂ ನ ಬೆಡ್ ಮೇಲೆ ಕೂರಿಸಿದರು.
ನಾನು ‘ಏನಾಗುತ್ತಿದೆ?’ ಎಂದು ಅವರನ್ನು ಪ್ರಶ್ನಿಸಿದೆ. ಅಷ್ಟಕ್ಕೆ ಒಬ್ಬಾತ ಕೈಯಿಂದ ನನಗೆ ಹೊಡೆದನು. ಹೊಡೆದ ರಭಸಕ್ಕೆ ನನಗೆ ಪ್ರಜ್ಞೆ ಹೋಯಿತು. ಸ್ವಲ್ಪ ಹೊತ್ತಿನ ನಂತರ ನನಗೆ ಪ್ರಜ್ಞೆ ಬಂದಾಗ ಅದೇ ವ್ಯಕ್ತಿ ಮತ್ತೆ ನನಗೆ ಹೊಡೆದರು. ದಾಳಿಕೋರರ ಪೈಕಿ ಕೆಲವರು ನನ್ನ ಬಟ್ಟೆಯನ್ನು ಹಿಡಿದು ಎಳೆದಾಡಿದರು.
ನನ್ನ ಸಹಪಾಠಿಗಳು ಮತ್ತು ಸ್ನೇಹಿತೆಯರೂ ಸಹ ದಾಳಿಕೋರರಿಂದ ಹಲ್ಲೆಗೆ ಒಳಗಾಗಿ ಗಾಯಗೊಂಡಿದ್ದರು. ಅಲ್ಲದೇ ಕೆಲವರ ಬಟ್ಟೆ ಹರಿದಿತ್ತು. ನನ್ನ ಸಹಪಾಠಿ ವಿದ್ಯಾರ್ಥಿನಿಯ ಚಿನ್ನದ ಪೆಂಡೆಂಟ್ ಇದ್ದ ಕತ್ತಿನ ಸರವನ್ನು ದಾಳಿಕೋರರು ಕಸಿದುಕೊಂಡರು.
ಇದನ್ನೂ ಓದಿ : ಸಂತ್ರಸ್ತರಿಗೆ ಸಹಾಯ: ಆರ್‌ಎಸ್‌ಎಸ್ ಸುಳ್ಳು
ನನ್ನ ಇಬ್ಬರು ಗೆಳತಿಯರು ದಾಳಿಕೋರರಿಂದ ಹೆಚ್ಚಿನ ತೊಂದರೆಗೆ ಒಳಗಾಗಿದ್ದರು. ಅಂದರೆ ಅಲ್ಲಿ ಬಂದಿದ್ದ ದಾಳಿಕೋರರು ಬಲವಂತವಾಗಿ ಅವರಿಬ್ಬರ ಮೈ ಮುಟ್ಟಿ ಪರಚಿದ್ದರು. ಹುಡುಗಿಯರಿಬ್ಬರ ಬಟ್ಟೆಗಳನ್ನು ಬಿಚ್ಚಿದ ಹಲ್ಲೆಕೋರರು ಅವರನ್ನು ಕರೆದುಕೊಂಡು ಬಂದು ನಾವಿದ್ದ ಬೆಡ್ ಮೇಲೆ ತಳ್ಳಿ ವೀಡಿಯೋಗ್ರಫಿ ಮಾಡಿದರು. ಈ ಘಟನೆ ನಡೆಯುತ್ತಿರುವಾಗಲೇ ಅಲ್ಲಿಗೆ ಪೊಲೀಸರು ಬಂದರು. ಪೊಲೀಸರು ಬಂದ ನಂತರ ಹಲ್ಲೆಕೋರರೆಲ್ಲ ಸ್ಥಳದಿಂದ ಹೊರಟುಹೋದರು.
ಬರ್ತ್ ಡೇಗೆಂದು ಹೋಗಿದ್ದ ನನ್ನನ್ನು, ನನ್ನ ಸ್ನೇಹಿತರನ್ನು ಪೊಲೀಸರು ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಹಲ್ಲೆಯ ಪರಿಣಾಮ ನನ್ನ ಎಡ ಕೆನ್ನೆ ಮತ್ತು ಕಿವಿಗೆ ಗಾಯಗಳಾಗಿದ್ದವು. ಅತಂಕದಲ್ಲಿದ್ದ ನಾನು ಚಿಕಿತ್ಸೆ ಬಗ್ಗೆ ಯೋಚಿಸಲಿಲ್ಲ. ಪೊಲೀಸ್ ಠಾಣೆಯಿಂದ ನನ್ನ ತಾಯಿ ಮತ್ತು ತಂದೆ ನನ್ನನ್ನು ಮನೆಗೆ ಕರೆದುಕೊಂಡು ಹೋದರು.
ಮರುದಿನ ನನಗಾಗಿದ್ದ ಗಾಯದ ಸಂಬಂಧ ವೈದ್ಯರಿಂದ ಚಿಕಿತ್ಸೆ ಪಡೆದಿದ್ದೇನೆ. ಘಟನೆ ಬಗ್ಗೆ ಒಟ್ಟು ನಾನು 2 ಸಲ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದೇನೆ, ಆದರೆ ಹೇಳಿಕೆಗಳ ನಿಖರವಾದ ದಿನಾಂಕ ನೆನಪಾಗುತ್ತಿಲ್ಲ. ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ಹೆಸರು ನನಗೆ ಗೊತ್ತಿದೆ. ಇಂದು ನ್ಯಾಯಾಲಯದ ಮುಂದೆ ನಿಂತಿರುವ ಆರೋಪಿಗಳ ಜೊತೆ ನನ್ನ ಮೇಲೆ ಹಲ್ಲೆ ಮಾಡಿದ ಆರೋಪಿ ಹಾಜರಾಗಿಲ್ಲ. ಆ ಆರೋಪಿಯನ್ನು ನೋಡಿದರೆ ಗುರುತಿಸಬಲ್ಲೆ.
ಪೊಲೀಸರು ನನ್ನನ್ನು ಠಾಣೆಗೆ ಕರೆಯಿಸಿ ಘಟನೆಯಲ್ಲಿ ಭಾಗಿಯಾಗಿದ್ದವರ ಪೈಕಿ ನಾಲ್ಕು ಜನರನ್ನು ತೋರಿಸಿದರು. ಆ ಪೈಕಿ 2 ರಿಂದ 3 ಜನರನ್ನು ನಾನು ಗುರುತಿಸಿದೆ. ನಾನು ಗುರುತಿಸಿದ ಮೂರು ಜನ ಆರೋಪಿಗಳು ಇಂದು ನ್ಯಾಯಾಲಯದ ಮುಂದೆ ಇರುವ ಆರೋಪಿಗಳೊಂದಿಗೆ ಹಾಜರಿಲ್ಲ. ನಮ್ಮಗಳ ಮೇಲೆ ಹಲ್ಲೆ ಮಾಡಲು ಬಂದಿದ್ದವರು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಎಂದು ನನಗೆ ಗೊತ್ತಿದೆ.
(ಹೋಂ ಸ್ಟೇ ದಾಳಿ ಘಟನೆಯ ದೃಶ್ಯಾವಳಿಗಳಿರುವ ಡಿವಿ ಕ್ಯಾಸೆಟ್‌ಗೆ ಮಾಡಲಾಗಿದ್ದ ಸೀಲನ್ನು ಓಪನ್ ಮಾಡಿ ವಿಡಿಯೋವನ್ನು ತೆರೆದ ನ್ಯಾಯಾಲಯದಲ್ಲಿ ಪ್ರಸಾರ ಮಾಡಲಾಯಿತು)
ಈಗ ನಾನು ನೋಡಿದ ದೃಶ್ಯಾವಳಿಗಳು ದಿನಾಂಕ 28.07.2012 ರಂದು ಹೋಂ ಸ್ಟೇನಲ್ಲಿ ಆಗಿದ್ದ ದೃಶ್ಯಾವಳಿಗಳು ಎಂಬುದನ್ನು ನಾನು ದೃಡೀಕರಿಸುತ್ತೇನೆ. ಈ ದೃಶ್ಯಾವಳಿಗಳಲ್ಲಿ ನಾನು ತಿಳಿಸಿರುವ ನನ್ನ ಕಾಲೇಜಿನ ಸಹಪಾಠಿಗಳು, ಸ್ನೇಹಿತರು ಮತ್ತು ದಾಳಿಕೋರರು ಎಲ್ಲರೂ ಸಹ ಇದ್ದೇವೆ. ದಾಳಿಕೋರರು ನಮ್ಮ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯಗಳೂ ಇವೆ. (ಸಾಕ್ಷಿಯಾಗಿರುವ ಸಂತ್ರಸ್ತ ವಿದ್ಯಾರ್ಥಿನಿ ಘಟನೆಯ ದೃಶ್ಯಾವಳಿಯನ್ನು ಗುರುತಿಸಿದ್ದರಿಂದ ಸದರಿ ಡಿವಿ ಕ್ಯಾಸೆಟನ್ನು ನಿಪಿ.38 ಎಂದು ಗುರುತಿಸಲಾಯಿತು.)
(ಅದೇ ರೀತಿ ಅದೇ ಮೆಮೊರಿ ಕಾರ್ಡ್‌ನಲ್ಲಿರುವ ದೃಶ್ಯಾವಳಿಗಳನ್ನು ಸಹ ಲ್ಯಾಪ್‌ಟಾಪ್ ಹಾಕಿ ಪ್ರಸಾರ ಮಾಡಲಾಯಿತು)
ದೃಶ್ಯಾವಳಿಗಳನ್ನು ನೋಡಿದ ನಂತರ ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಗುರುತಿಸಿದ್ದೇನೆ. ಆ ದಿನ ಹೋಂ ಸ್ಟೇ ಬಳಿ ಬಂದಿದ್ದ ಹಲ್ಲೆಕೋರರು ನಮ್ಮನ್ನು ಉದ್ದೇಶಿಸಿ ಬೇ***ಗಳೇ, ರಂ***ಮಕ್ಕಳೇ, ಮಜಾ ಮಾಡಲು ಬಂದಿದ್ದೀರಾ? ಕೊಲ್ಲುತ್ತೇವೆ, ಹುಡುಗೀಯರ ಬಟ್ಟೆಗಳನ್ನು ಹರಿಯಿರಿ, ಅವರನ್ನು ಬೆತ್ತಲೆ ಮಾಡಿ ಎಂದು ಹೇಳುತ್ತಿದ್ದರು. ದಾಳಿಕೋರರು ನನ್ನ ಗೆಳತಿಯರಾಗಿದ್ದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿ ಅವರ ಚಿನ್ನದ ಆಭರಣಗಳನ್ನು ದರೋಡೆ ಮಾಡಿದರು.
(ಇದು 06.08.2024 ರಂದು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಿಂದ ಹೋಂ ಸ್ಟೇ ಕೇಸ್ ನಿಂದ ಖುಲಾಸೆಗೊಂಡ ಆರೋಪಿಗಳ ಬಗ್ಗೆ ಸಂತ್ರಸ್ತ ವಿದ್ಯಾರ್ಥಿನಿ ನ್ಯಾಯಾಲಯದಲ್ಲಿ ನೀಡಿದ ಸಾಕ್ಷ್ಯದ ಸರಳೀಕೃತ ಬರಹ ರೂಪವಷ್ಟೆ )