ಅಂಕೋಲಾ: ತಮ್ಮ ಮನೆಯಿಂದ ಹೊರಬಂದು ಓಡಾಡಲು ಮನೆಯ ಮುಂದಿನ ನೀರು ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಪರಿಸರ ಪ್ರೇಮಿ ತುಳಸಿ ಗೌಡ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರಿನ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ತುಳಸಿ ಗೌಡರವರ ಮನೆಯಿದ್ದು, ಮಳೆಗಾಲದ ಸಂದರ್ಭದಲ್ಲಿ ಮನೆಯ ಮುಂದಿನ ಹಳ್ಳವನ್ನು ದಾಟಲು ಆಗುವುದಿಲ್ಲ ಹಾಗಾಗಿ ಹರಿಯುವ ಹಳ್ಳದಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ನಿಂತು ಸೇತುವೆ ನಿರ್ಮಿಸಿಕೊಡುವಂತೆ ವೀಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ.
73 ವರ್ಷದ ಪರಿಸರವಾದಿ ತುಳಸಿ ಗೌಡ ಅವರು ವಾಸಿಸುವ ಸ್ಥಳ ಮಳೆಗಾಲದ ಸಂದರ್ಭದಲ್ಲಿ ಅವರ ಜಲಾವೃತಗೊಳ್ಳುತ್ತದೆ. ಹಾಗೂ ಓಡಾಡುವುದು ಸಹ ದುಸ್ಸರವಾಗಿದೆ. ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ.
ಪ್ರತಿ ವರ್ಷ ಹೆಚ್ಚಿನ ಮಳೆಗಾಲದಲ್ಲಿ ಈ ಹಳ್ಳ ಭೋರ್ಗರೆದು ಹರಿಯುತ್ತದೆ. ನನಗೂ ವಯಸ್ಸಾಗಿದ್ದು ಆರೋಗ್ಯವಾಗಿರಲಿ, ಇಲ್ಲದಿರಲಿ ಈ ಹಳ್ಳವನ್ನು ದಾಟಲು ಆಗುತ್ತಿಲ್ಲ. ಆಸ್ಪತ್ರೆಗೆ ಹೋಗಬೇಕೆಂದರೂ ಹಳ್ಳವನ್ನು ದಾಟಿಯೇ ಹೋಗಬೇಕು. ನನ್ನ ಮೊಮ್ಮಕ್ಕಳಿಗೆ ಶಾಲೆಗೆ ಹೋಗಲು ಈ ಹಳ್ಳ ದಾಟಲು ಆಗುವುದಿಲ್ಲ. ಈ ಹಿಂದೆ ಶಾಸಕರಿಗೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೆ. ಸೇತುವೆ ಮಾಡಿಸುವುದಾಗಿ ಭರವಸೆ ನೀಡಿ ವರ್ಷ ಕಳೆದರೂ ಏನೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ತಾವೇ ಖುದ್ದಾಗಿ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಕಾಡನ್ನೇ ನಿರ್ಮಿಸಿರುವ ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರು ತಮ್ಮ ಬಾಲ್ಯದ ದಿನಗಳಿಂದ ಪರಿಸರ ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಮತ್ತು ಅದರ ಬಗ್ಗೆ ಜನರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಪರಿಸರದ ಬಗ್ಗೆ ಅವರಿಗಿರುವ ಕಾಳಜಿ ಮತ್ತು ಅದನ್ನು ಉಳಿಸಲು ನಡೆಸುತ್ತಿರುವ ಪರಿಶ್ರಮವನ್ನು ಗುರುತಿಸಿ ಭಾರತ ಸರ್ಕಾರ 2020ರ ಸಾಲಿಗೆ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿತು. ಆದರೆ ಕೋವಿಡ್ ಪಿಡುಗುನಿಂದಾಗಿ 2021 ರಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.