ಬೆಂಗಳೂರು: ಮಂಡ್ಯ ಜಿಲ್ಲೆಯ ಅಗರಲಿಂಗನ ದೊಡ್ಡಿ ಗ್ರಾಮದಲ್ಲಿ ನಾಲ್ಕು ತಿಂಗಳ ಒಳಗೆ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಿಸಲು ನೀಡಿದ್ದ ನಿರ್ದೇಶನವನ್ನು ಪಾಲಿಸದ ರಾಜ್ಯ ಸರ್ಕಾರವನ್ನು ಶುಕ್ರವಾರ ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಕಿಡಿ ಕಾರಿರುವ ಹೈಕೋರ್ಟ್ ಕಟ್ಟಡವನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಮೂರು ತಿಂಗಳ ಕಾಲಾವಕಾಶ ಮತ್ತೆ ನೀಡಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗಾಗಿ 2018 ರಲ್ಲಿ ಶಾಲಾ ಕಟ್ಟಡವನ್ನು ಕೆಡವಲಾಗಿತ್ತು. ಅಂದಿನಿಂದ ಪ್ರಸ್ತುತ ಶಾಲೆಯನ್ನು ಸಣ್ಣ ಕೊಠಡಿಯ ಮೂಲಕ ನಡೆಸಲಾಗುತ್ತಿದೆ. ಆದರೆ ಈ ಶಾಲೆಯಲ್ಲಿ ಬೆಂಚುಗಳು, ಅಡುಗೆ ಮಾಡಲು ಸ್ಥಳ ಮತ್ತು ಶೌಚಾಲಯ ಸೇರಿದಂತೆ ಯಾವುದೆ ಮೂಲಭೂತ ಸೌಕರ್ಯವಿಲ್ಲದೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಮಂಡ್ಯ
ಕಟ್ಟಡ ನಿರ್ಮಾಣಕ್ಕೆ ಇದೊಂದೆ ಬಾರಿ ಕಾಲಾವಕಾಶ ನೀಡಲಾಗುವುದು, ಮುಂದಕ್ಕೆ ಯಾವುದೇ ಕಾಲಾವಕಾಶ ನೀಡಲಾಗುವುದಿಲ್ಲ. ಒಂದು ವೇಳೆ ತಪ್ಪು ಮರುಕಳಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ಇದನ್ನೂ ಓದಿ: ಚೆನ್ನೈ | ರಾಜಭವನ ಪೆಟ್ರೋಲ್ ಬಾಂಬ್ ಪ್ರಕರಣ – ಆರೋಪಿಗೆ ಬಿಜೆಪಿ ಜೊತೆಗೆ ಸಂಬಂಧ!
“ರಾಜ್ಯದ ಕೈಯಲ್ಲಿ ಈಗ ಅಗತ್ಯವಿರುವುದು ಹಳ್ಳಿಯಲ್ಲಿ ಮಕ್ಕಳಿಗೆ ಓದಲು ಶಾಲೆಯನ್ನು ಪೂರ್ಣಗೊಳಿಸುವುದು. ಅದು ಅವರ ಹಕ್ಕಾಗಿದೆ. ರಾಜ್ಯವು ತನ್ನ ನಿಷ್ಕ್ರಿಯತೆಯಿಂದ ಹೊರಬರಬೇಕಿದೆ. ರಾಜ್ಯವು RTE ಕಾಯಿದೆಯಡಿಯಲ್ಲಿ ಮಕ್ಕಳ ಶಿಕ್ಷಣ ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಬಯಸಿದರೆ, ತ್ವರಿತವಾಗಿ ಕಾರ್ಯನಿರ್ವಹಿಸಬೇಕು” ಎಂದು ಹೈಕೋರ್ಟ್ ಹೇಳಿದೆ.
2023ರ ಏಪ್ರಿಲ್‌ನಲ್ಲಿ ನ್ಯಾಯಾಲಯ ನೀಡಿದ್ದ ನಾಲ್ಕು ತಿಂಗಳ ಸಮಯಾವಕಾಶ ಕಳೆದರೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.
ಇದನ್ನು ಆಲಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ರಿಟ್ ಅರ್ಜಿಯನ್ನು ವಿಲೇವಾರಿ ಮಾಡುವಾಗ ನ್ಯಾಯಾಲಯ ನೀಡಿದ ಆದೇಶದ ಹೊರತಾಗಿಯೂ ಬಡ ಮಕ್ಕಳ ಶಾಲೆ ಸ್ಥಾಪನೆಗೆ ರಾಜ್ಯವು ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ಫೈಲ್ ಅನ್ನು ರವಾನಿಸುತ್ತಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಿಪಡಿಸಿದರು.
ರಾಜ್ಯಕ್ಕೆ ಮಕ್ಕಳ ಬಗ್ಗೆ ಕಾಳಜಿ ಇದ್ದರೆ, ತಕ್ಷಣವೇ ಕಾರ್ಯನಿರ್ವಹಿಸಬೇಕು. ಕಾಲವಾಕಾಶ ಕೋರಿ ಮತ್ತೊಂದು ಅರ್ಜಿಯನ್ನು ತರಬೇಡಿ, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ವಿಡಿಯೊ ನೋಡಿ: ಮುಂಬಡ್ತಿ ಗೊಂದಲ ನಿವಾರಣೆಗೆ ಆಗ್ರಹಿಸಿ ಶಿಕ್ಷಕ – ಉಪನ್ಯಾಸಕರ ಪ್ರತಿಭಟನೆ