ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ-ಮಂಡ್ಯ ಜನತೆಗೆ ಬಗೆಯುತ್ತಿರುವ ದ್ರೋಹ: ಸಿಪಿಐ(ಎಂ)

ಮಂಡ್ಯ: ಲೋಕಸಭಾ ಸದಸ್ಯರು, ಸಿನಿಮಾ ನಟರೂ ಆದ ಶ್ರೀಮತಿ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲಿಸಲು ತೀರ್ಮಾನಿಸಿರುವುದು ಮಂಡ್ಯ ಜಿಲ್ಲೆಯ ಜನತೆಗೆ ಬಗೆದ ದ್ರೋಹವಾಗಿದೆ, ಇದನ್ನು ಜಿಲ್ಲೆಯ ಜನತೆ ಕ್ಷಮಿಸುವುದಿಲ್ಲ, ಲಾಭಕ್ಕಾಗಿ ಕೋಮುವಾದಿಯಾದ ಸುಮಲತಾ ಅವರ ನಡೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಮಂಡ್ಯ ಜಿಲ್ಲಾ ಸಮಿತಿ ಬಲವಾಗಿ ಖಂಡಿಸಿದೆ.

ಹೇಳಿಕೆಯನ್ನು ನೀಡಿರುವ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಟಿ.ಎಲ್. ಅವರು, ಸುಮಲತಾ ಅಂಬರೀಶ್ ಪಕ್ಷೇತರ ಎಂಬ ಹೆಸರಿನ ನಾಟಕ ಮಾಡಿ ಜಿಲ್ಲೆಯ ಜನರ, ಪ್ರಗತಿಪರರ, ಪ್ರಗತಿಪರ ಸಂಘಟನೆಗಳ ಹಾಗೂ ಬದುಕಿನುದ್ದಕ್ಕೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತಿರುವ ವ್ಯಕ್ತಿಗಳ ಮತ ಪಡೆದು ಈಗ ಅಧಿಕಾರ ಮತ್ತು ಅಂತಸ್ತಿಗಾಗಿ ಬಿಜೆಪಿ ಎಂಬ ಒಂದು ಫ್ಯಾಸಿಸ್ಟ್ ಪಕ್ಷವನ್ನು ಬೆಂಬಲಿಸುವುದು‌, ಅವರನ್ನು ನಂಬಿ ಬೆಂಬಲಿಸಿದ ಎಲ್ಲರ ಬೆನ್ನಿಗೂ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ದಿವಂಗತ ಅಂಬರೀಶ್ ಅವರ ಹೆಸರಿನಲ್ಲಿ ಮತಯಾಚಿಸಿದ ಸುಮಲತಾ ಅವರು ಅಂಬರೀಶ್‌ ಅವರು ಎಲ್ಲಾ ಜಾತಿ ಧರ್ಮಗಳನ್ನು ಮೀರಿದ ಜಾತ್ಯತೀತ ಕಲಾವಿದರಾಗಿದ್ದರು ಮತ್ತು ಅವರು ಬಿಜೆಪಿಯ ಆಮಿಷಗಳಿಗೆ ಎಂದೂ ಬಲಿಯಾಗಿರಲಿಲ್ಲ ಎಂಬುದು ನೆನಪಾಗಲಿಲ್ಲವೆ? ಎಂದು ಸಿಪಿಐ(ಎಂ) ಪ್ರಶ್ನಿಸಿದೆ.

ಇದನ್ನು ಓದಿ: ʻಸುಮಲತಾ – ಕುಮಾರಸ್ವಾಮಿʻ ರಾಜಕೀಯ ಕೆಸರೆರಚಾಟದಲ್ಲಿ ಸ್ಪೋಟಗೊಂಡಿದ್ದು “ಅಕ್ರಮ ಗಣಿಗಾರಿಕೆ”

ಅಂಬರೀಶ್ ಅವರ ಜಾತ್ಯತೀತ ನಂಬಿಕೆಗೆ ದ್ರೋಹ ಬಗೆಯುತ್ತಿರುವ ನಿಮ್ಮನ್ನು ಅಂಬರೀಶ್ ಅವರ ಅಭಿಮಾನಿಗಳು ಮಂಡ್ಯ ಜಿಲ್ಲೆಯ ದುಡಿಯುವ ಮಣ್ಣಿನ ಮಕ್ಕಳು ಎಂದೂ ಕ್ಷಮಿಸುವುದಿಲ್ಲ. ನೀವು ಈಗ ತಿಂದಿರುವ ಕೇಸರಿ ಉಪ್ಪಿಗೆ ಸಾಕಷ್ಟು ನೀರು ಕುಡಿಯಬೇಕಾಗುತ್ತದೆ ಎಂದು ಸಿಪಿಐ(ಎಂ) ತಿಳಿಸಿದೆ.

ಬಿಜೆಪಿ ಒಂದು ಅನಾಗರಿಕ, ಮಹಿಳಾ ವಿರೋಧಿ, ಮನುವಾದಿ ರಾಜಕೀಯ ಪಕ್ಷ. ಜಿಲ್ಲೆಯ ಜನರಿಗೆ ಬದುಕು ಕಲ್ಪಿಸಿದ ಟಿಪ್ಪು ಅವರಿಗೆ ಪ್ರತಿಕ್ಷಣವೂ ಅವಮಾನ ಮಾಡುತ್ತಾ, ಜಿಲ್ಲೆಯ ಒಕ್ಕಲಿಗರನ್ನು ಬ್ರಿಟಿಷರ ಏಜೆಂಟರು ಎಂದು ಬಿಂಬಿಸಿ ಅವಮಾನ ಮಾಡುತ್ತಿರುವ ಪಕ್ಷ. ಇಂತಹ ಪಕ್ಷಕ್ಕೆ ಕೇವಲ ಅಧಿಕಾರ ಮತ್ತು ಅಂತಸ್ತಿನ ಕಾರಣಕ್ಕೆ ಬೆಂಬಲಿಸುತ್ತಿರುವ ನಿಮ್ಮ ವಿವೇಚನೆಗೆ ಗೆದ್ದಲು ಹಿಡಿದಿದೆಯೆ? ಎಂದು ಸಿಪಿಐ(ಎಂ) ಖಾರವಾಗಿ ಪ್ರಶ್ನಿಸಿದೆ.

ಇದನ್ನು ಓದಿ: ಅಕ್ರಮ ಗಣಿ ಪ್ರದೇಶಕ್ಕೆ ಸಂಸದೆ ಸುಮಲತಾ ಭೇಟಿ, ಸಿಬಿಐ ತನಿಖೆಗೆ ಆಗ್ರಹ

ಸುಮಲತಾ ಅವರ ದ್ರೋಹದ ತೀರ್ಮಾನವನ್ನು ಸಿಪಿಐ(ಎಂ) ಮಂಡ್ಯ ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದಿರುವ ಕೃಷ್ಣೇಗೌಡ ಟಿ.ಎಲ್. ಅವರು, ಸುಮಲತಾ ಅವರ ಅವಕಾಶವಾದಿ, ಸ್ವಾರ್ಥಪರ ತೀರ್ಮಾನವನ್ನು ಜಿಲ್ಲೆಯ ಜನತೆ ಬೆಂಬಲಿಸಬಾರದು ಎಂದು ಮನವಿ ಮಾಡಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *