ಬೆಂಗಳೂರು: ರಾಜ್ಯ ಆಡಳಿತ ಪಕ್ಷ ಬಿಜೆಪಿ ಪಕ್ಷದ ಮಂಡ್ಯ ಜಿಲ್ಲಾ ಮುಖಂಡರಿಂದಲೇ ಭಾರೀ ವಿರೋಧವನ್ನು ಎಳೆದುಕೊಂಡಿದ್ದ ಕಂದಾಯ ಸಚಿವ ಆರ್. ಅಶೋಕ್ ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಬದಲಿಸಲಾಗಿದೆ. ಈ ಬಗ್ಗೆ ಖುದ್ದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಸಚಿವ ಅಶೋಕ್ ಅವರನ್ನು ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಮ್ಮನ್ನು ಉಸ್ತುವಾರಿಯಿಂದ ಮುಕ್ತಗೊಳಿಸುವಂತೆ ಆಶೋಕ್ ತಮಗೆ ಪತ್ರ ಬರೆದಿದ್ದರು. ಅದರಂತೆ ಮಂಡ್ಯ ಜಿಲ್ಲೆ ಉಸ್ತುವಾರಿ ಬದಲಾಯಿಸಲಾಗಿದ್ದು, ಇನ್ನು ಯಾರನ್ನೂ ನೇಮಕ ಮಾಡಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ʻಮಂಡ್ಯ ಬಿಟ್ಟು ಹೋಗಿʼ ; ಬಿಜೆಪಿಗರಿಂದಲೇ ಸಚಿವ ಆರ್ ಅಶೋಕ್ ವಿರುದ್ಧ ಅಭಿಯಾನ
ಸಚಿವ ಆರ್ ಅಶೋಕ್ ಮಂಡ್ಯ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಮೇಲೆ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ವ್ಯಕ್ತವಾಯಿತು. ಕೆಲ ದಿನಗಳ ಹಿಂದೆ ಮಂಡ್ಯ ಬಿಟ್ಟು ತೊಲಗಿ ಅಶೋಕ ಅಭಿಯಾನವೂ ನಡೆದಿತ್ತು. ಜಿಲ್ಲೆಯಲ್ಲಿ ಹೊತ್ತಿಕೊಂಡಿರುವ ಅಸಮಾಧಾನ ಹೊಗೆ ಜೋರಾದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಎಂಬ ಹಿನ್ನೆಲೆಯಲ್ಲಿ ಅಶೋಕ್ ಅವರನ್ನು ಬದಲಾಯಿಸಲಾಗಿದೆ ಎನ್ನಲಾಗಿದೆ.
ಸಚಿವ ಆರ್ ಅಶೋಕ್ ಅವರು ಮೂಲತಃ ಬೆಂಗಳೂರು ನಗರದವರಾಗಿದ್ದು, ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರಿಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ನೀಡಿರುವುದರಿಂದ ಅತ್ತ ಮಂಡ್ಯಕ್ಕೂ ಹೋಗದೆ, ಇತ್ತ ಪದ್ಮನಾಭ ನಗರ ಕ್ಷೇತ್ರಕ್ಕೂ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಚಿವ ಆರ್ ಅಶೋಕ್ ಅವರಿಗೆ ಹಿನ್ನಡೆ ಉಂಟಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ