ಬೆಂಗಳೂರು: ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರದ ನಡುವೆ ಪಶು ಸಂಗೋಪನಾ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಅದರಂತೆ, ಇನ್ನು ಮುಂದೆ ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು ಎಂದು ಸೂಚನೆ ನೀಡಲಾಗಿದೆ. ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನುಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯವಾಗಿ ಇರಲಿದೆ. ಪಶುಸಂಗೋಪನಾ ಇಲಾಖೆ ಈ ಬಗ್ಗೆ ಆದೇಶ ನೀಡಿದೆ.
ಪ್ರಾಣಿ ವಧೆ ಮಾಡುವ ಮುನ್ನ ಸ್ಟನ್ನಿಂಗ್ ಮಾಡಿಸಲೇಬೇಕು ಎಂದು ಹೇಳಲಾಗಿದದ್ದು, ಕೋಳಿ, ಕುರಿ ಅಂಗಡಿಗಳಿಗೆ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಸ್ಟನ್ನಿಂಗ್ ಎಂದರೆ, ಪ್ರಾಣಿಗಳನ್ನು ವಧೆ ಮಾಡುವ ಮುನ್ನ ಪ್ರಜ್ಞೆ ತಪ್ಪಿಸುವ ವಿಧಾನ ಆಗಿದೆ. ಪ್ರಜ್ಞೆ ತಪ್ಪಿಸುವುದರಿಂದ ಪ್ರಾಣಿಗಳನ್ನು ಸಾಯಿಸುವಾಗ ಅವುಗಳಿಗೆ ನೋವು ತಿಳಿಯುವುದಿಲ್ಲ.
ಆಹಾರಕ್ಕಾಗಿ ಪ್ರಾಣಿವಧೆ ಮಾಡುವಾಗ ಹಿಂಸೆ ನೀಡಬಾರದು. ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕು. ಬೆಂಗಳೂರು ವ್ಯಾಪ್ತಿಯಲ್ಲಿ ‘ಸ್ಟನ್ನಿಂಗ್’ ಮಾಡುವುದು ಕಡ್ಡಾಯ ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಉಮಾಪತಿ ತಿಳಿಸಿದ್ದಾರೆ. ಪ್ರಾಣಿಗಳಿಗೆ ಹಿಂಸೆ ನೀಡಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮೀರಿದರೆ 50 ಸಾವಿರದಿಂದ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ಸ್ಟನ್ನಿಂಗ್ ಎಂದರೇನು?
ಸ್ಟನ್ನಿಂಗ್ ಮೆಥಡ್‌ನಿಂದ ಪ್ರಾಣಿಗಳು ನರಳಾಟದಿಂದ ಸಾಯೋದಿಲ್ಲ. ಸ್ಟನ್ನಿಂಗ್ ವೇಳೆ ಪ್ರಾಣಿಗಳ ತಲೆಗೆ ಜೋರಾಗಿ ಹೊಡೆಯಲಾಗುತ್ತದೆ. ಆಗ ಪ್ರಾಣಿಗಳ ತಲೆಗೆ ಪೆಟ್ಟು ಬಿದ್ದು ಅವುಗಳ ಮೆದುಳು ನಿಷ್ಕ್ರಿಯಗೊಳ್ಳುತ್ತದೆ. ಆ ವೇಳೆ ಪ್ರಾಣಿಗಳನ್ನು ವಧೆ ಮಾಡಲಾಗುತ್ತದೆ. ಹೀಗೆ, ಇನ್ನು ಮುಂದೆ ಕೋಳಿ, ಕುರಿ ಅಂಗಡಿಗಳಿಗೆ ಪರವಾನಗಿ ನೀಡುವಾಗಲೂ ಸ್ಟನ್ನಿಂಗ್ ವ್ಯವಸ್ಥೆಗಳು ಕಡ್ಡಾಯ ಇರಬೇಕಾಗುತ್ತದೆ.
ಸ್ಟನ್ನಿಂಗ್ ವ್ಯವಸ್ಥೆ ಇಲ್ಲದಿದ್ದರೆ ಪರವಾನಗಿ ನೀಡಬಾರದು. 2001ರ ಸೆಕ್ಷನ್ 6 ಮತ್ತು 4ರ ಅಡಿಯಲ್ಲಿ ಸ್ಟನ್ನಿಂಗ್ ನಿಯಮ ಇದೆ. ನಿಯಮ ಬ್ರೇಕ್ ಮಾಡುವವರಿಗೆ 1960 ಆಕ್ಟ್ ಪ್ರಕಾರ 5 ಸಾವಿರದಿಂದ 50 ಸಾವಿರದವರೆಗೂ ದಂಡ ವಿಧಿಸಲಾಗುವುದು ಎಂದು ಸೂಚನೆ ಕೊಡಲಾಗಿದೆ.
ಆಕ್ಟ್ ಅಡಿಯಲ್ಲಿ ಪ್ರಾಣಿ ಹಿಂಸೆಯ ಪ್ರಕರಣ ದಾಖಲು ಮಾಡಲಾಗುವುದು ಎಂದು ಹೇಳಲಾಗಿದೆ. ಹೀಗಾಗಿ ಆಹಾರಕ್ಕಾಗಿ ಕೋಳಿ, ಕುರಿ ವಧೆ ಮಾಡುವವರು ಸ್ಟನ್ನಿಂಗ್ ನಿಯಮ ಅನುಸರಿಸಬೇಕಾಗಿದೆ.