ಸರ್ಕಾರ ನಿಗದಿಪಡಿಸಿದ ದರದಲ್ಲೇ ಪ್ರಯಾಣಿಕರಿಂದ ಹಣ ವಸೂಲಿ ಮಾಡಬೇಕು | ನಿಯಮ ಉಲ್ಲಂಘಿಸುವ ವಾಹನಗಳ ಜಪ್ತಿಗೆ ಸಾರಿಗೆ ಸಚಿವರ ಎಚ್ಚರಿಕೆ | ಹೊಸ ವರ್ಷದಿಂದ ಜಾರಿಗೆ ಬರುವ ಸಾಧ್ಯತೆ
ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಬರ್, ಓಲಾ ಸೇರಿದಂತೆ ಎಲ್ಲ ಅಪ್ಲಿಕೇಶನ್ ಆಧಾರಿತ ಬಾಡಿಗೆ ಕಾರುಗಳಿಗೆ ಇನ್ನು ಮುಂದೆ ದರಮಾಪಕ (ಮೀಟರ್) ಅಳವಡಿಸುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬಾಡಿಗೆ ಕಾರುಗಳ ಚಾಲಕರು ಮತ್ತು ಮಾಲೀಕರಿಗೆ ಖಾಸಗಿ ಸೇವಾ ಸಂಸ್ಥೆಗಳಿಂದ ಆಗುತ್ತಿರುವ ಶೋಷಣೆಯನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ. ಉಬರ್
ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಬಾಡಿಗೆ ಕಾರುಗಳು ದರಮಾಪಕ ಅಳವಡಿಸಿಕೊಳ್ಳಬೇಕು. ಪ್ರಯಾಣಿಕರಿಂದ ಸರ್ಕಾರ ನಿಗದಿಪಡಿಸಿದ ದರವನ್ನು ಮಾತ್ರ ವಸೂಲಿ ಮಾಡಬೇಕು. ಇದನ್ನು ಉಲ್ಲಂಘಿಸುವ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಉಬರ್, ಓಲಾ ಸೇರಿದಂತೆ ವಿವಿಧ ಬಾಡಿಗೆ ಕಾರು ಸೇವಾ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಚಾಲಕರು ಮತ್ತು ವಾಹನ ಮಾಲೀಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಂಸ್ಥೆಗಳು ವಿಧಿಸುವ ಹೆಚ್ಚಿನ ಸೇವಾ ಶುಲ್ಕ ಹಾಗೂ ಚಾಲಕರಿಗೆ ದೊರೆಯುವ ಕಡಿಮೆ ಆದಾಯದ ಬಗ್ಗೆ ಚಾಲಕರು ಸರ್ಕಾರದ ಗಮನ ಸೆಳೆದಿದ್ದರು. ದರಮಾಪಕ ಕಡ್ಡಾಯಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಚಾಲಕರು ಮತ್ತು ವಾಹನ ಮಾಲೀಕರ ಹಿತದೃಷ್ಟಿಯಿಂದ ಅವರ ಬೇಡಿಕೆಯನ್ನು ಸರ್ಕಾರ ಪರಿಗಣಿಸಿದೆ ಎಂದು ಸಚಿವರು ಹೇಳಿದ್ದಾರೆ.
ಹೊಸ ನಿಯಮ ರೂಪಿಸುತ್ತಿರುವ ಸರ್ಕಾರ
ಬಾಡಿಗೆ ಕಾರುಗಳಿಗೆ ದರಮಾಪಕ ಕಡ್ಡಾಯಗೊಳಿಸುವ ನಿರ್ಧಾರ ಜಾರಿಗೆ ತರಲು ಅಗತ್ಯವಾದ ನಿಯಮಗಳು ಮತ್ತು ಕಾನೂನು ರೂಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಇದನ್ನು ಜಾರಿಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಸರ್ಕಾರ ನಿಗದಿಪಡಿಸಿದ ಪ್ರಯಾಣ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದನ್ನು ತಡೆಯುವುದು ಹಾಗೂ ಚಾಲಕರು ಮತ್ತು ಪ್ರಯಾಣಿಕರ ಹಿತಾಸಕ್ತಿ ಕಾಪಾಡುವುದು ಈ ಕ್ರಮದ ಉದ್ದೇಶವಾಗಿದೆ.
ಕಾಲುದಾರಿಯಲ್ಲಿ ವಾಹನ ಚಲಾಯಿಸಿದರೆ ₹5,000 ದಂಡ
ಇದೇ ಸಂದರ್ಭದಲ್ಲಿ ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಚಲಾಯಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ ₹5,000 ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಸಿಕ್ಕಿಬಿದ್ದರೆ ₹10,000 ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿಯೂ ಇದೇ ತಪ್ಪು ಮಾಡಿದರೆ ವಾಹನವನ್ನು ಜಪ್ತಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಂಬಂಧವೂ ಅಗತ್ಯ ಕಾನೂನು ರೂಪಿಸಲಾಗುತ್ತಿದ್ದು, ಸರ್ಕಾರದ ಅನುಮೋದನೆ ಬಳಿಕ ಜಾರಿಗೆ ಬರಲಿದೆ. ಉಬರ್
ಇದನ್ನೂ ಓದಿ : ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಕಾಂಗ್ರೆಸ್ನಲ್ಲಿ ಭಿನ್ನಮತ: ಆರ್ಎಸ್ಎಸ್ ಕಾರ್ಯಕರ್ತರಿಗೆ ಅವಕಾಶ ನೀಡಿದ್ದಕ್ಕೆ ಆಕ್ಷೇಪ
ಗ್ರೀನ್ ಎಸ್ಎಂ ಕಾರುಗಳ ಹೊಸ ನೋಂದಣಿಗೆ ತಡೆ
ವಿಯೆಟ್ನಾಂ ಮೂಲದ ಗ್ರೀನ್ ಎಸ್ಎಂ ಬಾಡಿಗೆ ಕಾರು ಸಂಸ್ಥೆಯ ಹೊಸ ವಾಹನಗಳ ನೋಂದಣಿಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಈ ಸಂಸ್ಥೆಯ ಸುಮಾರು 100 ಕಾರುಗಳು ನೋಂದಣಿಯಾಗಿವೆ. ಮತ್ತಷ್ಟು ವಾಹನಗಳ ನೋಂದಣಿಗೆ ಅವಕಾಶ ನೀಡುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಸಾರಿಗೆ ನೌಕರರ ಬಾಕಿ ವೇತನಕ್ಕೆ ₹280 ಕೋಟಿ ಬಿಡುಗಡೆ
ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಬಾಕಿ ಉಳಿದಿರುವ ವೇತನ ಪಾವತಿಗಾಗಿ ಸರ್ಕಾರ ₹280 ಕೋಟಿ ಬಿಡುಗಡೆ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಒಟ್ಟು ಸುಮಾರು ₹1,200 ಕೋಟಿ ವೇತನ ಬಾಕಿ ಉಳಿದಿದ್ದು, ಈ ಹಿಂದೆ ಮೊದಲ ಕಂತಿನಲ್ಲಿ ₹450 ಕೋಟಿ ಹಾಗೂ ಎರಡನೇ ಕಂತಿನಲ್ಲಿ ₹170 ಕೋಟಿ ಬಿಡುಗಡೆ ಮಾಡಲಾಗಿತ್ತು. ಇದೀಗ ಮೂರನೇ ಕಂತಿನಲ್ಲಿ ₹280 ಕೋಟಿ ಬಿಡುಗಡೆ ಮಾಡಲಾಗಿದೆ. ಉಳಿದ ₹300 ಕೋಟಿಯನ್ನು ಹಣಕಾಸಿನ ಲಭ್ಯತೆಗೆ ಅನುಗುಣವಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ : ಕೃಷಿಮೇಳ | ಕೃಷಿಯಲ್ಲಿ ಹೊಸ ಸಾಧ್ಯತೆಗಳ ಅನಾವರಣ: ಮೂರು ದಿನಗಳ ಕೃಷಿ ಮೇಳಕ್ಕೆ ಚಾಲನೆ Janashakthi Media
