ಕುಟುಂಬದ ಬಗ್ಗೆ ಹರಡಿರುವ ಸುಳ್ಳುಗಳಿಗೆ ಉತ್ತರಿಸಲು ಆತ್ಮಕಥೆ ಬರೆದೆ: ಸೋನಿಯಾ ಗಾಂಧಿ

Please follow and like us:
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಯ ನೆನಪುಗಳನ್ನು ಬರೆಯುವುದು ಅತ್ಯಂತ ನೋವಿನ ಸಂಗತಿಯಾಗಿತ್ತು | ರಾಹುಲ್, ಪ್ರಿಯಾಂಕಾ ಒತ್ತಾಯದ ಮೇರೆಗೆ ಬರವಣಿಗೆಗೆ ಮುಂದಾದೆ
ನವದೆಹಲಿ: ತಮ್ಮ ಕುಟುಂಬದ ಬಗ್ಗೆ ಹಲವು ಸುಳ್ಳು ಕಥೆಗಳು ಮತ್ತು ತಪ್ಪು ಮಾಹಿತಿಗಳು ಹರಡುತ್ತಿರುವುದರಿಂದ ಸತ್ಯಾಂಶಗಳನ್ನು ಜನರ ಮುಂದಿಡುವ ಉದ್ದೇಶದಿಂದ ಆತ್ಮಕಥೆ ಬರೆಯಲು ನಿರ್ಧರಿಸಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಸೋಮವಾರ (ನವೆಂಬರ್ 16) ನವದೆಹಲಿಯಲ್ಲಿ ತಮ್ಮ ಆತ್ಮಕಥೆ Belonging: A Journey of Love ಕೃತಿಯ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಜೀವನದ ವೈಯಕ್ತಿಕ ಅನುಭವಗಳು, ಕುಟುಂಬದೊಂದಿಗಿನ ಸಂಬಂಧಗಳು ಹಾಗೂ ಎದುರಿಸಿದ ಕಷ್ಟನಷ್ಟಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ತಮ್ಮ ಅತ್ತೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗಳಿಗೆ ಸಂಬಂಧಿಸಿದ ಘಟನೆಗಳನ್ನು ಬರೆಯುವುದು ಅತ್ಯಂತ ಕಷ್ಟದ ಕೆಲಸವಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಈ ನೋವಿನ ಘಟನೆಗಳನ್ನು ಮತ್ತೆ ನೆನಪಿಸಿಕೊಂಡು ಬರೆಯುವಾಗ ಹಲವು ಬಾರಿ ಭಾವನಾತ್ಮಕವಾಗಿ ಕುಗ್ಗಿದ್ದಾಗಿ ತಿಳಿಸಿದ್ದಾರೆ.

ತಮ್ಮ ಕುಟುಂಬದ ಬಗ್ಗೆ ಹೊರಜಗತ್ತಿನಲ್ಲಿ ಸಾಕಷ್ಟು ಸಂಗತಿಗಳನ್ನು ಬರೆಯಲಾಗುತ್ತಿದೆ. ಆದರೆ ಅವುಗಳಲ್ಲಿ ಬಹಳಷ್ಟು ವಾಸ್ತವಕ್ಕೆ ದೂರವಾಗಿವೆ. ಕುಟುಂಬದ ಸದಸ್ಯರ ಬಗ್ಗೆ ನೋವುಂಟುಮಾಡುವ ಸುಳ್ಳು ಕಥೆಗಳನ್ನು ಹರಡಲಾಗುತ್ತಿದೆ. ಹೀಗಾಗಿ ತಮ್ಮ ಅನುಭವಗಳ ಮೂಲಕ ಕುಟುಂಬದ ನೈಜ ಬದುಕನ್ನು ಜನರಿಗೆ ಪರಿಚಯಿಸಬೇಕೆಂಬ ಉದ್ದೇಶದಿಂದ ಈ ಕೃತಿ ಬರೆದಿರುವುದಾಗಿ ಸೋನಿಯಾ ಹೇಳಿದ್ದಾರೆ.

ರಾಹುಲ್, ಪ್ರಿಯಾಂಕಾ ಒತ್ತಾಯದ ಮೇರೆಗೆ ಬರವಣಿಗೆ

ತಮ್ಮ ವೈಯಕ್ತಿಕ ಭಾವನೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ತಮಗೆ ಆರಂಭದಲ್ಲಿ ಹಿಂಜರಿಕೆಯಿತ್ತು. ಆದರೆ ಪುತ್ರ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಆತ್ಮಕಥೆ ಬರೆಯಲು ನೆರವಾದ ಮಂಜುಲಿಕಾ ದುಬೆ ಅವರ ನಿರಂತರ ಒತ್ತಾಯದ ಮೇರೆಗೆ ಬರೆಯಲು ಒಪ್ಪಿಕೊಂಡೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಬರೆಯಲು ಆರಂಭಿಸಿದ ಬಳಿಕ ನೆನಪುಗಳು ಒಂದೊಂದಾಗಿ ಹರಿದುಬಂದವು. ಆರಂಭದಲ್ಲಿ ಕಷ್ಟವೆನಿಸಿದರೂ ನಂತರ ಬರವಣಿಗೆ ಸಹಜವಾಗಿ ಮುಂದುವರಿಯಿತು ಎಂದು ಅವರು ಹೇಳಿದ್ದಾರೆ.

ತಾವು ಬಾಲ್ಯದಿಂದಲೂ ಅಥವಾ ರಾಜಕೀಯ ಜೀವನದಲ್ಲಿಯೂ ದಿನಚರಿ ಬರೆಯುವ ಅಭ್ಯಾಸ ಹೊಂದಿರಲಿಲ್ಲ. ಹೀಗಾಗಿ ಈ ಕೃತಿಯನ್ನು ಬರೆಯಲು ಮುಖ್ಯವಾಗಿ ತಮ್ಮ ನೆನಪುಗಳನ್ನೇ ಅವಲಂಬಿಸಬೇಕಾಯಿತು ಎಂದು ವಿವರಿಸಿದ್ದಾರೆ.

ಇಟಲಿಯಿಂದ ಭಾರತಕ್ಕೆ ಬಂದ ದಿನಗಳ ನೆನಪು

ಕೃತಿಯ ಶೀರ್ಷಿಕೆಯಾದ Belonging (ಒಂದಾಗಿ ಬೆರೆತು ಬದುಕುವುದು) ತಮ್ಮ ಜೀವನದ ಅನುಭವವನ್ನು ಪ್ರತಿಬಿಂಬಿಸುತ್ತದೆ ಎಂದು ಸೋನಿಯಾ ಹೇಳಿದ್ದಾರೆ.

1965ರಲ್ಲಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿ 19 ವರ್ಷದ ಯುವತಿಯಾಗಿದ್ದಾಗ ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿಗೆ ಭೇಟಿಯಾದದ್ದು, ಪ್ರೀತಿ, ವಿವಾಹದ ಬಳಿಕ ಭಾರತಕ್ಕೆ ಬಂದದ್ದು ಹಾಗೂ ಹೊಸ ಕುಟುಂಬದ ವಾತಾವರಣಕ್ಕೆ ಹೊಂದಿಕೊಳ್ಳಲು ನಡೆಸಿದ ಪ್ರಯತ್ನಗಳನ್ನು ಕೃತಿಯಲ್ಲಿ ದಾಖಲಿಸಿದ್ದಾರೆ.

ಇಟಲಿಯಲ್ಲಿನ ತಮ್ಮ ಜೀವನಕ್ಕಿಂತ ಗಾಂಧಿ ಕುಟುಂಬದ ವಾತಾವರಣ ಹೆಚ್ಚು ಔಪಚಾರಿಕವಾಗಿತ್ತು. ಆರಂಭದಲ್ಲಿ ಇಂದಿರಾ ಗಾಂಧಿ ಅವರನ್ನು ಕಂಡರೆ ಭಯವಾಗುತ್ತಿತ್ತು. ಅವರನ್ನು ‘ಅಮ್ಮ’ ಎಂದು ಕರೆಯಲು ಕೂಡ ಸಮಯ ಹಿಡಿಯಿತು ಎಂದು ನೆನಪಿಸಿಕೊಂಡಿದ್ದಾರೆ.

ಭಾರತದ ಸಂಸ್ಕೃತಿ, ಸಂಪ್ರದಾಯ ಮತ್ತು ಕುಟುಂಬದ ಪದ್ಧತಿಗಳಿಗೆ ಹೊಂದಿಕೊಳ್ಳಲು ತಮ್ಮ ಬಾಲ್ಯದ ಬೆಳವಣಿಗೆ ಸಹಾಯ ಮಾಡಿತು. ಮದುವೆಯ ಬಳಿಕ ಹೊಸ ಕುಟುಂಬಕ್ಕೆ ಹೊಂದಿಕೊಳ್ಳುವ ಸವಾಲು ಅನೇಕ ಭಾರತೀಯ ಮಹಿಳೆಯರಿಗೂ ಎದುರಾಗುತ್ತದೆ. ತಮ್ಮ ಅನುಭವವೂ ಅದಕ್ಕಿಂತ ಭಿನ್ನವಾಗಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮಂಗಳೂರಿನಲ್ಲಿ ಒಂದೇ ದಿನದ ಸಚಿವ ಸಂಪುಟ ಸಭೆಗೆ ₹3.83 ಕೋಟಿ ಖರ್ಚು!

ರಾಜಕೀಯಕ್ಕೆ ಬರಲು ರಾಜೀವ್ ಅವರಿಗೆ ಆರಂಭದಲ್ಲಿ ವಿರೋಧಿಸಿದ್ದೆ

ರಾಜೀವ್ ಗಾಂಧಿ ರಾಜಕೀಯಕ್ಕೆ ಪ್ರವೇಶಿಸುವುದನ್ನು ಆರಂಭದಲ್ಲಿ ತಾವು ವಿರೋಧಿಸಿದ್ದಾಗಿ ಸೋನಿಯಾ ಬಹಿರಂಗಪಡಿಸಿದ್ದಾರೆ. ರಾಜಕೀಯಕ್ಕೆ ಬಂದರೆ ಕುಟುಂಬದೊಂದಿಗೆ ಕಳೆಯುವ ಸಮಯ ಕಡಿಮೆಯಾಗುತ್ತದೆ ಎಂಬ ಆತಂಕ ತಮ್ಮಲ್ಲಿತ್ತು. ಆದರೆ ರಾಜೀವ್ ರಾಜಕೀಯಕ್ಕೆ ಬಂದ ಬಳಿಕ ಅವರೊಂದಿಗೆ ಕಳೆಯುವ ಅಲ್ಪ ಸಮಯವೂ ಹೆಚ್ಚು ಮಹತ್ವ ಪಡೆದುಕೊಂಡಿತು. ಇದರಿಂದ ಪರಸ್ಪರ ಸಂಬಂಧ ಮತ್ತಷ್ಟು ಗಟ್ಟಿಯಾಯಿತು ಎಂದು ತಿಳಿಸಿದ್ದಾರೆ.

ರಾಜೀವ್ ಗಾಂಧಿ ಹತ್ಯೆಯ ಬಳಿಕ ಕುಟುಂಬದ ಪಾತ್ರಗಳೇ ಬದಲಾದವು. ತಾವು ಮಗುವಿನಂತಾದರೆ, ರಾಹುಲ್ ಮತ್ತು ಪ್ರಿಯಾಂಕಾ ತಮ್ಮನ್ನು ಪೋಷಕರಂತೆ ನೋಡಿಕೊಂಡರು ಎಂದು ಭಾವುಕರಾಗಿ ಸ್ಮರಿಸಿದ್ದಾರೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಮುಖ ನಾಯಕರು

ನವದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ತೃಣಮೂಲ ಕಾಂಗ್ರೆಸ್‌ನ ಅಭಿಷೇಕ್ ಬ್ಯಾನರ್ಜಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗವಹಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ನೋಡಿ : ಕೃಷಿಮೇಳ | ಕೃಷಿಯಲ್ಲಿ ಹೊಸ ಸಾಧ್ಯತೆಗಳ ಅನಾವರಣ: ಮೂರು ದಿನಗಳ ಕೃಷಿ ಮೇಳಕ್ಕೆ ಚಾಲನೆ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *