- ಪಂಜಾಬ್‌ನ ಲೂಧಿಯಾನ ಕೋರ್ಟ್‌ನ ಒಳಗೆ ಸಂಭವಿಸಿದ್ದ ಭಾರಿ ಸ್ಫೋಟ
- ಸ್ಫೋಟದಲ್ಲಿ ಮೃತಪಟ್ಟವನು ಮಾಜಿ ಹೆಡ್ ಕಾನ್‌ಸ್ಟೇಬಲ್ ಗಗನ್‌ದೀಪ್ ಸಿಂಗ್
- 2019ರಲ್ಲಿ ಪೊಲೀಸ್ ಸೇವೆಯಿಂದ ವಜಾಗೊಂಡು ಜೈಲು ಸೇರಿದ್ದ ಶಂಕಿತ
- ಡಿ.23ರಂದು ಲೂಧಿಯಾನ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ನಡೆದಿದ್ದ ಘಟನೆ
ಚಂಡಿಗಡ: ಪಂಜಾಬ್‌ನ ಲೂಧಿಯಾನದ ನ್ಯಾಯಾಲಯದಲ್ಲಿ ನಡೆದ ಸ್ಫೋಟದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿದೆ. ಆತನೇ ಬಾಂಬರ್ ಎಂದು ಶಂಕಿಸಲಾಗಿದ್ದು, ಅಚ್ಚರಿಯೆಂಬಂತೆ ಆತ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಬಾಂಬರ್‌ನ ದೇಹವನ್ನು ಮಾಜಿ ಪೊಲೀಸ್ ಗಗನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಹೆಡ್ ಕಾನ್‌ಸ್ಟೆಬಲ್ ಆಗಿದ್ದ ಆತನನ್ನು 2019 ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತಸಲ್ಪಟ್ಟಿದ ಆತ ನಂತರ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ. ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಗಗನ್‌ದೀಪ್ ಸಿಂಗ್ನ ಸಿಮ್ ಕಾರ್ಡ್ ಮತ್ತು ವೈರ್‌ಲೆಸ್ ಡಾಂಗಲ್ ಮೂಲಕ ಆತನ ಗುರುತು ಪತ್ತೆಹಚ್ಚಲು ಸಾಧ್ಯವಾಯಿತು ಎಂದು ಹೇಳಲಾಗಿದೆ. ಕುಟುಂಬಸ್ಥರೂ ಕೂಡ ದೇಹ ಗಗನ್ದೀಪ್ದೇ ಎಂದು ಖಚಿತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪತ್ತೆಯಾಗಿದ್ದು ಹೇಗೆ ?: ಆತನ ಸಿಮ್ ಕಾರ್ಡ್ ಹಾಗೂ ವೈರ್‌ಲೆಸ್ ಡೋಂಗಲ್ ಆತನ ಗುರುತು ಪತ್ತೆಮಾಡಲು ನೆರವಾಗಿವೆ. ಅದು ಸಿಂಗ್‌ನದ್ದೇ ದೇಹ ಎಂದು ಕುಟುಂಬದವರು ಖಚಿತಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲೂಧಿಯಾನ ಕೋರ್ಟ್ ಸ್ಫೋಟ ನಡೆದ ಸ್ಥಳದಲ್ಲಿ ಎನ್‌ಎಸ್‌ಜಿ ಬಾಂಬ್ ದಳ ಹಾಗೂ ವಿಧಿವಿಜ್ಞಾನ ತಜ್ಞರು ನಡೆಸಿದ ಪ್ರಾಥಮಿಕ ವಿಶ್ಲೇಷಣೆ ಪ್ರಕಾರ, ಅಲ್ಲಿ ಬಳಸಿದ ಬಾಂಬ್ ‘ಅಧಿಕ ಸ್ಫೋಟಕ’ ಸಾಮರ್ಥ್ಯ ಹೊಂದಿತ್ತು. ಬಾಂಬರ್ ಅದನ್ನು ಜೋಡಿಸುತ್ತಿದ್ದ ಸಂದರ್ಭದಲ್ಲಿ ಬಾಂಬ್ ಆಕಸ್ಮಿಕವಾಗಿ ಟಾಯ್ಲೆಟ್ ಒಳಗೆ ಬಿದ್ದಿರಬಹುದು. ಎಂದು ತಿಳಿದು ಬಂದಿದೆ.
ಮೃತನ ದೇಹದಲ್ಲಿ ಅಲ್ಯೂಮಿನಿಯಂ ಮತ್ತು ಪ್ಲಾಸ್ಟಿಕ್ ತುಣುಕುಗಳು ಸಿಕ್ಕಿವೆ. ಇದರಿಂದ ಆತ ಬಾಂಬ್ ಸ್ಫೋಟದ ಮೂಲಕ ಗರಿಷ್ಠ ಹಾನಿ ಉಂಟುಮಾಡಲು ಬಯಸಿದ್ದ ಎನ್ನುವುದನ್ನು ಖಚಿತಪಡಿಸಿದೆ. ಆತನ ದೇಹದಲ್ಲಿ ಉಂಟಾಗಿರುವ ಗಾಯದ ಸ್ವರೂಪಗಳು, ಆತನೇ ಸುಧಾರಿತ ಸ್ಫೋಟಕವನ್ನು ನಿಭಾಯಿಸುತ್ತಿದ್ದ ಎಂಬುದನ್ನು ಸೂಚಿಸುತ್ತಿದೆ. ಗಗನ್‌ದೀಪ್ ಸಿಂಗ್ ಬಾಂಬರ್ ಎನ್ನುವುದು ಬಹುತೇಕ ದೃಢಪಟ್ಟಿದ್ದರೂ, ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಕೆಲವು ಜನರ ಬಗ್ಗೆಯೂ ಶಂಕೆ ಇದೆ. ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 23 ರಂದು ಸ್ಪೋಟ ಪ್ರಕರಣ ನಡೆದಿತ್ತು. ಸ್ಪೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದರೆ ನಾಲ್ವರು ಗಂಭೀರವಾಗಿ ಗಾಯಗೊಂಡರೆ, ಹಲವರಿಗೆ ಸಣ್ನಪುಟ್ಟ ಗಾಯಗಳಾಗಿದ್ದವು. ಸ್ಫೋಟದಲ್ಲಿ ಪಾಕಿಸ್ತಾನಿ ಏಜೆನ್ಸಿಗಳು ಅಥವಾ ಖಲಿಸ್ತಾನಿ ಗುಂಪುಗಳು ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿಕೆ ನೀಡಿದ್ದರು. ಸ್ಪೋಟದ ನಂತರ ಭಯೋತ್ಪಾದಕರ ಕೃತ್ಯ, ಪಾಕಿಸ್ತಾನ ಮತ್ತು ಖಲಿಸ್ತಾನಿಗಳ ಕೈವಾಡ ಎಂದೆಲ್ಲ ಅಪಪ್ರಚಾರ ಮಾಡಲಾಗಿತ್ತು. ಈಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮೃತ ವ್ಯಕ್ತಿಯೇ ಅಪರಾಧಿ ಎಂಬುದು ಸ್ಪಷ್ಟವಾಗಿದೆ.