ದುಬೈನಿಂದ ಬಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು 1 ಕೆಜಿ ಚಿನ್ನದ ಗಟ್ಟಿ: ಎಕ್ಸ್​-ರೇ ವೇಳೆ ಬಯಲಾಯ್ತು ಸತ್ಯ

ಕರಿಪುರ: ಚಿನ್ನ ಕಳ್ಳ ಸಾಗಣೆ ಮಾಡುವವರು ಎಂತಹ ಕುತಂತ್ರಗಳನ್ನು ಸಹ ಮಾಡಲಿದ್ದಾರೆ. ಇಲ್ಲೊಬ್ಬ ತನ್ನ ಹೊಟ್ಟೆಯಲ್ಲಿ 1 ಕೆಜಿ ಚಿನ್ನವನ್ನು ಇಟ್ಟುಕೊಂಡು ಸಾಗಣೆ ಮಾಡುತ್ತಿದ್ದ ಎಂದು ಬಯಲಾಗಿದ್ದು, ಆತನನ್ನು ಕೇರಳದ ಕರಿಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಮಲಪ್ಪುರಂ ಜಿಲ್ಲೆಯ ವರಿಯಂಕೋಡ್ ಮೂಲದ ನಿವಾಸಿಯಾಗಿರುವ 36 ವರ್ಷದ ನೌಫಲ್‌ ಎಂಬ ಆರೋಪಿ ತನ್ನ ಹೊಟ್ಟೆಯಲ್ಲಿ 4 ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿದ್ದನು. ವರದಿಗಳ ಪ್ರಕಾರ, ನೌಫಲ್ ಸೆಪ್ಟೆಂಬರ್ 19ರಂದು ದುಬೈನಿಂದ ಬಂದಿದ್ದ. ಆತ ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದಾನೆ ಎಂಬ ಮಾಹಿತಿಯೊಂದಿಗೆ ಪೊಲೀಸರು ಆತನನ್ನು ತಪಾಸಣೆ ಮಾಡಿದ್ದರು.

ವಿಮಾನ ನಿಲ್ದಾಣದಲ್ಲಿ ಆತನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದರೂ ಸುಳಿವು ಸಿಗಲಿಲ್ಲ. ಪೊಲೀಸರು ಆತನ ದೇಹ ಮತ್ತು ಸಾಮಾನು ಸರಂಜಾಮುಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಆದರೆ, ಅವರಿಗೆ ಚಿನ್ನ ಪತ್ತೆಯಾಗಲಿಲ್ಲ.

ನಂತರ ಅವನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸ್ಕ್ಯಾನಿಂಗ್‌ ಮಾಡಲು ಕರೆದೊಯ್ಯಲಾಯಿತು. ಅಲ್ಲಿ ಆತನ ಹೊಟ್ಟೆಯಲ್ಲಿ ಚಿನ್ನದ ಲೋಹ ಪತ್ತೆಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ವಿಮಾನ ನಿಲ್ದಾಣದಲ್ಲಿ ಈ ರೀತಿಯ 59 ಚಿನ್ನ ಕಳ್ಳಸಾಗಣೆ ಪ್ರಕರಣಗಳು ಪತ್ತೆಯಾಗಿವೆ.

ನೌಫಲ್ ತನ್ನ ಗುದನಾಳದಲ್ಲಿ 4 ಚಿನ್ನದ ಗಟ್ಟಿಗಳನ್ನು ಬಚ್ಚಿಟ್ಟುಕೊಂಡು ದುಬೈನಿಂದ ಬಂದಿದ್ದ. ಈ ಚಿನ್ನದ ತೂಕ 1.063 ಕೆಜಿ ಇತ್ತು. ಆಸ್ಪತ್ರೆಯಲ್ಲಿ ಕೂಲಂಕುಷವಾಗಿ ಪರಿಶೀಲನೆ ನಡೆಸಿದ ಬಳಿಕವೇ ಪ್ರಕರಣ ಬೆಳಕಿಗೆ ಬಂದಿದೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ಕೆಲವು ತಿಂಗಳಿನಲ್ಲಿ ಕರಿಪುರ ವಿಮಾನ ನಿಲ್ದಾಣದಲ್ಲಿ ವರದಿಯಾಗುತ್ತಿರುವ 59ನೇ ಚಿನ್ನದ ಕಳ್ಳಸಾಗಣೆ ಪ್ರಕರಣ ಇದಾಗಿದೆ.

Donate Janashakthi Media

Leave a Reply

Your email address will not be published. Required fields are marked *