ಮಳವಳ್ಳಿ : ಮಹಿಳೆಯರು ಬಸ್ ಡೋರ್‌ ಮುರಿದಿಲ್ಲ: ಸಾರಿಗೆ ಸಂಸ್ಥೆ ಸಿಬ್ಬಂದಿ ಸ್ಪಷ್ಟನೆ

ಮಳವಳ್ಳಿ : ಕಳಚಿಕೊಳ್ಳುವ ಹಂತದಲ್ಲಿದ್ದ ಸಾರಿಗೆ ಸಂಸ್ಥೆ ಬಸ್‌ನ ಬಾಗಿಲನ್ನು ಚಾಲಕ, ನಿರ್ವಾಹಕ ಬದಲಾಯಿಸಿದರು. ಆದರೆ, ಬಾಗಿಲನ್ನು ಮಹಿಳೆಯರೇ ಮುರಿದು ಹಾಕಿದರು ಎಂಬ ಸುಳ್ಳು ಸುದ್ದಿ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.

ಮಳವಳ್ಳಿ ಬಸ್‌ ನಿಲ್ದಾಣದಿಂದ ಮೈಸೂರು ಕಡೆಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್‌ನ ಬಾಗಿಲು ಅಲುಗಾಡುತ್ತಿತ್ತು. ಮಹಿಳೆಯರೂ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬಸ್‌ ಹತ್ತುತ್ತಿದ್ದರು. ಬಾಗಿಲು ಕಿತ್ತು ಬರುವ ಅಪಾಯ ಅರಿತ ಚಾಲಕ, ನಿರ್ವಾಹಕ ಹಾಗೂ ಸಂಚಾರ ನಿಯಂತ್ರಕ ಡಿಪೊ ಸಿಬ್ಬಂದಿಗೆ ಕರೆ ಮಾಡಿ ಬೇರೆ ಡೋರ್‌ ತರಿಸಿದರು.

ಡೋರ್‌ ಬದಲಾಯಿಸುತ್ತಿರುವ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕಿಡಿಗೇಡಿಗಳು ಮಹಿಳೆಯರೇ ಡೋರ್‌ ಮುರಿದು ಹಾಕಿದ್ದಾರೆ ಎಂದು ಸುಳ್ಳು ಸಂದೇಶ ಹಾಕಿದ್ದರು, ಇದರಿಂದ ಗೊಂದಲ ಸೃಷ್ಟಿಯಾಗಿತ್ತು.

ಇದಕ್ಕೆ ಡಿಪೊ ವ್ಯವಸ್ಥಾಪಕ ಶಿವಕುಮಾರ್‌ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ‘ಡೋರ್‌ ಮೊದಲೇ ಕಳಚಿಕೊಳ್ಳುವ ಹಂತ ತಲುಪಿತ್ತು. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ನಿಲ್ದಾಣದಲ್ಲೇ ಡೋರ್‌ ಬದಲಾಯಿಸಿದೆವು’ ಎಂದು ತಿಳಿಸಿದರು.

ಎರಡು ದಿನಗಳ ಹಿಂದೆ ಮಾಜಿ ಸಾರಿಗೆ ಸಚಿವ ಆರ್. ಅಶೋಕ್, ಶಕ್ತಿ ಯೋಜನೆಯನ್ನು ಖಂಡಿಸುವ ನೆಪದಲ್ಲಿ ಬಸ್ ಎಷ್ಟುದಿನ ಉಚಿತ ಇರುತ್ತೋ ಗೊತ್ತಿಲ್ಲ, ಸುತ್ತಾಡಿಬಿಡಿ ಎಂದು ಕರೆ ನೀಡಿದ್ದರು. ಇನ್ನೂ ಗೋಧಿ ಮೀಡಿಯಾಗಳು ಇದನ್ನು ಪ್ರಾಪಗಂಡಾ ಮಾಡುವ ಮೂಲಕ ದುಷ್ಟ ಹುನ್ನಾರವನ್ನು ಹೊರಹಾಕುತ್ತಿವೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಗೋಧಿ ಮೀಡಿಯಾಗಳು ಅಶಾಂತಿ ಸೃಷ್ಟಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *