ಸಿಎಂ ಖುರ್ಚಿಯ ಮೇಲೆ ಕಣ್ಣಿಟ್ಟವರಿಗೆ ಎಚ್ಚರಿಕೆ ನೀಡಿದ ಖರ್ಗೆ

ಕಲಬುರಗಿ: ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವುದನ್ನು ಹೈಕಮಾಂಡ್​ ತೀರ್ಮಾನ ಮಾಡಲಿದೆ. ಮೊದಲು ಕಾಂಗ್ರೆಸ್ ಆಡಳಿತಕ್ಕೆ ತರುವ ಕೆಲಸ ಆಗಲಿ, ಕಚ್ಚಾಟದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು.

ಕಲಬುರಗಿಯಲ್ಲಿ ನಡೆದ ಕಲ್ಯಾಣ ಕ್ರಾಂತಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಈ ರೀತಿಯಾಗಿ ಮಾತನಾಡಿದ ಅವರು, ನನಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಹೀಗಾಗಿ ಯಾರೇ ಮುಖ್ಯಮಂತ್ರಿ, ಸಚಿವರಾದರೂ ಅವರಿಗೆ ನನ್ನ ಬೆಂಬಲವಿರುತ್ತದೆ. ಮುಖ್ಯಮಂತ್ರಿ, ಸಚಿವ ಸ್ಥಾನಕ್ಕೆ ಅವರು ಬೇಡ, ಇವರು ಬೇಡ ಎಂದು ಹೇಳುವುದಿಲ್ಲ. ಯಾರೇ ಮುಖ್ಯಮಂತ್ರಿಯಾದರೂ ನನ್ನ ಬೆಂಬಲವಿರುತ್ತದೆ ಎಂದರು.

ನಮ್ಮ ಪಕ್ಷ, ಆರ್ಟಿಕಲ್ 371(J) ಜಾರಿಯಾದ ನಂತರ ಮೊದಲ ಬಾರಿಗೆ ವಾರ್ಷಿಕ ರೂ‌1500 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿ ಅದರಂತೆ ಅನುದಾನ ನೀಡಿದ್ದೆವು. ಆದರೆ ನಂತರ ಬಂದ ಸರ್ಕಾರ ಅದರಂತೆ ನಡೆದುಕೊಳ್ಳಲಿಲ್ಲ. ಕರ್ನಾಟಕ ಭಾಗದಲ್ಲಿ 50,000 ಹುದ್ದೆಗಳು‌ ಖಾಲಿ‌ ಇವೆ. ಸರ್ಕಾರ ಈ‌ ಹುದ್ದೆಗಳನ್ನು‌ ಯಾಕೆ ತುಂಬುತ್ತಿಲ್ಲ? ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಕೇವಲ ಕರ್ನಾಟಕ ಭಾಗ ಮಾತ್ರವಲ್ಲದೇ ಇಡೀ ರಾಜ್ಯದ ಖಾಲಿ‌ ಹುದ್ದೆಗಳನ್ನು ತುಂಬುತ್ತೇವೆ ಎಂದು ಭರವಸೆ ನೀಡಿದರು.

ಮುಂದುವೆರದು, ನಾನು ಗುಜರಾತ್​ಗೆ ಹೋದಾಗ ಮೋದಿ 71,000 ಸರ್ಕಾರದ ಹುದ್ದೆ ತುಂಬಿದ ಆದೇಶದ ಪ್ರತಿಯನ್ನು ಕೊಟ್ಟ ಸುದ್ದಿಯನ್ನು ಟಿವಿಯಲ್ಲಿ ನೋಡಿದೆ. ಸರ್ಕಾರದ ಅಧಿಕಾರಿಗಳು ಮಾಡುವ ಕೆಲಸವನ್ನು ಪ್ರಧಾನಿ ಮೋದಿ ಪ್ರಚಾರ ತೆಗೆದುಕೊಂಡರು. ಆದರೆ ದೇಶದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬುತ್ತಿಲ್ಲ. ಈ ಹುದ್ದೆ ಭರ್ತಿಯಾದರೆ‌ ಎಷ್ಟು ಕುಟುಂಬಗಳಿಗೆ ಅನುಕೂಲವಾಗಲಿದೆ. ಅಂದಾಜು ಎರಡು ಕೋಟಿ‌ ಜನರಿಗೆ ಅನ್ನ ಸಿಗಲಿದೆ. ಆ ಕೆಲಸ ಮಾಡುವ ಬದಲು ಬರೀ ಮಾತುಗಳನ್ನೇ ಆಡುತ್ತಿದ್ದಾರೆ. ಪ್ರತಿ ವರ್ಷ 2 ಕೋಟಿ‌ ಹುದ್ದೆಗಳು ಎಲ್ಲಿ ಹೋದವು. ಬರೀ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿಯನ್ನು ಖರ್ಗೆ ಟೀಕಿಸಿದರು.

ಈ ಭಾಗದ ಅಭಿವೃದ್ಧಿಗೆ ಪ್ರತಿವರ್ಷ 5000 ಕೋಟಿ ಅನುದಾನ ನೀಡುವುದರ ಜೊತೆಗೆ ಹೊಸ ಕೈಗಾರಿಕ ನೀತಿ ಜಾರಿಗೆ ತರುವ ಮೂಲಕ ಒಂದು ಲಕ್ಷ ಹುದ್ದೆ ಸೃಷ್ಟಿಸುತ್ತೇವೆ. ಗೋದಾವರಿ ಹಾಗೂ ಕೃಷ್ಣ ನದಿ ನೀರು ಬಳಕೆಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ಮಾಡುತ್ತೇವೆ. ಈ ಭಾಗಕ್ಕೆ ಎಜುಕೇಷನ್ ಜೋನ್ ಮಾಡಿ‌ ಬಾಲಕಿಯರಿಗೆ ಪ್ರತ್ಯೇಕ ಡಿಗ್ರಿ ಕಾಲೇಜು ಸ್ಥಾಪನೆಯನ್ನು ಪ್ರತಿ ಜಿಲ್ಲೆಯಲ್ಲಿ ಮಾಡಲಿದ್ದೇವೆ. ಐದು ವರ್ಷದಲ್ಲಿ ಈ ಭಾಗದ‌ ಜನರಿಗೆ ಮನೆ ಕಟ್ಟಿಸಿಕೊಡಲಿದ್ದೇವೆ. ನಾವು ಭರವಸೆ ನೀಡಿದಂತೆ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಇದು ನಮ್ಮ ಬದ್ಧತೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಖರ್ಗೆ ಮನವಿ ಮಾಡಿದರು.

ಕೇಂದ್ರ ಬಿಜೆಪಿ ಈ ರಾಜ್ಯಕ್ಕೆ ಯಾವುದೇ ಪ್ರಮುಖ ಯೋಜನೆ ತಂದಿಲ್ಲ. ಕೈಗಾರಿಕೆ ಸ್ಥಾಪನೆ ಕೂಡ ಮಾಡಿಲ್ಲ. ಆದರೂ ಕೆಲವರು ಮೋದಿ ಹೆಸರು ಹೇಳುತ್ತಿದ್ದಾರೆ.‌ ಗುಜರಾತ್ ನಂತರ ಈಗ ರಾಜ್ಯಕ್ಕೆ‌ ಬಿಜೆಪಿಯ ಮೋದಿ- ಶಾ ಬರುತ್ತಿದ್ದಾರೆ. ನಾನು ನಮ್ಮ ಪಕ್ಷದ‌ ನಾಯಕರಿಗೆ ಹೇಳುವುದಿಷ್ಟೇ ನೀವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿ. ಹಿಮಾಚಲದಲ್ಲಿ ಹತ್ತಂಶದ ಕಾರ್ಯಕ್ರಮ ಕೊಟ್ಟಿದ್ದರಿಂದ ಗೆದ್ದು ನೂತನ ಸಿಎಂ ಕೂಡ ಬರಲಿದ್ದಾರೆ. ಹಾಗಾಗಿ ಇಲ್ಲಿಯೂ ಕೂಡಾ ಅದೇ ತರ ಮಾಡಬೇಕು. ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ. ನಾನು ಯಾರ ಪರ ಇಲ್ಲ, ನನಗೆ ಬೇಕಾಗಿರುವುದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅನ್ನೋದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *