ಬೀದರ್: ಸಂವಿಧಾನ ಜಾರಿಯಾದ ದಿನ (ಗಣರಾಜ್ಯೋತ್ಸವ ದಿನ) ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ಅವಮಾನಿಸಿ ರಾಷ್ಟ್ರದ್ರೋಹ ವೆಸಗಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಅಮಾನತು ಮಾಡಿ ರಾಷ್ಟ್ರ ದ್ರೋಹ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಪ್ರತಿಭಟನೆ ನಡೆಸಲಾಗಿದೆ.
ಬೀದರ್‌ನಲ್ಲಿ ಪ್ರತಿಭಟನೆ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್), ಮಾದಿಗ ದಂಡೋರಾ ಹೋರಾಟ ಸಮಿತಿ, ಡಾ.ಬಾಬು ಜಗಜೀವನರಾಮ ಯುವಕ ಸಂಘ, ಮಹಾತ್ಮಾ ಜ್ಯೋತಿಬಾ ಫುಲೆ ಯುತ್ ಕ್ಲಬ್ ಸೇರಿದಂತೆ ಹಲವು ಸಂಘಟನೆಯವರು ಭಾಗಿಯಾಗಿದ್ದರು.
73ನೇ ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡುವಾಗ ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾ ನ್ಯಾಯಾಧೀಶರು ಡಾ.ಬಾಬಾ.ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ತೆಗೆದು ಅವಮಾನ ಮಾಡಿ ರಾಷ್ಟ್ರ ದ್ರೋಹ ಬಗೆದಿರುತ್ತಾರೆ. ಸಂವಿಧಾನ ರಚನೆ ಮಾಡಿರುವ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿರುವ ನ್ಯಾಯಾಧೀಶರಿಂದ ಸಾಮಾಜಿಕ ನ್ಯಾಯ ಸಿಗಬಹುದು ಎನ್ನುವುದು ಭ್ರಮೆಯ ವಿಷಯ ಗಣರಾಜ್ಯೋತ್ಸವದಂದು ಅಂಬೇಡ್ಕರ್ ಭಾವಚಿತ್ರ ಇಟ್ಟು ಗೌರವಿಸಬೇಕೆಂಬ ಸರ್ಕಾರದ ಆದೇಶವಿದ್ದರು ಸಹ ಉದ್ಧಟತನದಿಂದ ಭಾವಚಿತ್ರವನ್ನು ಉದ್ದೇಶ ಪೂರ್ವಕವಾಗಿ ತೆಗೆದು ಅವಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರಾದಸಂಸ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌಧ್ದೆ, ಆರ್.ಪಿ.ಐ (ಅಂಬೇಡ್ಕರ್) ಪಕ್ಷ ಜಿಲ್ಲಾಧ್ಯಕ್ಷ ಮಹೇಶ ಗೋರನಾಳಕರ್, ಮಾದಿಗ ದಂಡೋರಾ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡೀಸ್ ಹಿಪ್ಪಳಗಾಂವ್, ಡಾ.ಬಾಬು ಜಗಜೀವನರಾಮ ಯುವಕ ಸಂಘದ ಅಧ್ಯಕ್ಷ ಅಭಿ ಕಾಳೆ, ಮಹಾತ್ಮಾ ಜ್ಯೋತಿಬಾ ಫುಲೆ ಯುತ್ ಕ್ಲಬ್ ಅಧ್ಯಕ್ಷ ಪವನಕುಮಾರ ಮಿಠಾರೆ ಮಾತನಾಡಿದರು.
ಸಂಘಟನೆಯ ಪ್ರಮುಖರಾದ ರಾಹುಲ್ ಹಾಲಹಿಪ್ಪರ್ಗಾಕರ್, ಶಿವು ಡಿ.ಕೆ, ಶಿವರಾಜ ಮಾಮಡಗಿಕರ್, ಶಿವು ಗೂನಳ್ಳಿ, ಪ್ರಕಾಶ ರಾವಣ, ಶಿವರಾಜ ಅಮಲಾಪೂರ, ಶಿವಕುಮಾರ ತುಂಗಾ ಇನ್ನಿತರರು ಇದ್ದರು.
ವರದಿ: ಬಾಲಾಜಿ ಕುಂಬಾರ