ಬೆಂಗಳೂರು: ಇತ್ತೀಚಿಗೆ ಜಿಟಿ ಮಾಲ್ ಪಂಚೆ ಉಟ್ಟಿದ್ದ ರೈತನಿಗೆ ಅಪಮಾನ ಮಾಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಇದೀಗ ಮಾಲ್‌ಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
ಬಿಬಿಎಂಪಿ ವ್ಯಾಪ್ತಿಗೆ ಬರುವ ಎಲ್ಲಾ ವಾಣಿಜ್ಯ ಸಮುಚ್ಚಯಗಳು ಹಾಗೂ ಇತರ ಅಂಗಡಿಗಳ ಮಾಲೀಕರಿಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಸಾರ್ವಜನಿಕರಿಗೆ ಪ್ರವೇಶ ಸಂದರ್ಭದಲ್ಲಿ ಭಾಷೆ, ಜಾತಿ, ಜನಾಂಗ, ಧರ್ಮ, ಉಡುಪು ಮತ್ತು ಜನ್ಮಸ್ಥಳ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.
ಬೆಂಗಳೂರಿನ ಎಲ್ಲಾ ಮಾಲ್, ಸೂಪರ್ ಮಾರ್ಕೆಟ್ ಸೇರಿದಂತೆ ಅಂಗಡಿಗಳಿಗೆ ಮಾರ್ಗಸೂಚಿ ರಚಿಸಿದೆ. ಮುಂದಿನ ದಿನಗಳಲ್ಲಿ ವಂಚ ಮಾದರಿಯ ಘಟನೆ ಮರುಕಳಿಸದಂತೆ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ಪಶ್ಚಿಮ ಘಟ್ಟದ ಅನಧಿಕೃತ ಹೋಂ ಸ್ಟೇ, ರೆಸಾರ್ಟ್ ತೆರವಿಗೆ ಅರಣ್ಯ ಸಚಿವರ ಸೂಚನೆ
ಎಲ್ಲ ವಾಣಿಜ್ಯ ಸಮುಚ್ಚಯಗಳು ಉಡುಪಿನ ಆಧಾರದ ಮೇಲೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಣೆ ಮಾಡದಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಬೇಕು. ರೈತನಿಗೆ ಅಪಮಾನ ಮಾಡಿದ ರೀತಿಯ ಪ್ರಕರಣಗಳು ಮರುಕಳಿಸಿದರೆ ಪರವಾನಗಿ ರದ್ದುಗೊಳಿಸಲಾಗುವುದು. ಜೊತೆಗೆ ಭಾರತೀಯ ನ್ಯಾಯ ಸಂಹಿತೆ ಅಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಘಟನೆ ಹಿನ್ನೆಲೆ
ಹಾವೇರಿ ಮೂಲದ ನಾಗರಾಜ್ ಜುಲೈ 16ರಂದು ತಮ್ಮ ತಂದೆ – ತಾಯಿಗೆ ಸಿನಿಮಾ ತೋರಿಸಲು ಬೆಂಗಳೂರಿನ ಮಾಗಡಿ ರಸ್ತೆ ಜಿಟಿ ಮಾಲ್ ಕರೆದೊಯ್ದಿದ್ದಾರೆ. ಆದರೆ, ನಾಗರಾಜ್ ತಂದೆ ಪಂಚೆ ಹಾಕಿಕೊಂಡು ತಲೆಗೆ ಪಟಗ ಸುತ್ತಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಅವರನ್ನು ಮಾಲ್ ಒಳಗೆ ಪ್ರವೇಶಿಸಲು ನಿರಾಕರಿಸಿದ್ದರು. ಒಳಗೆ ಬಿಡಿ ಎಂದು ಪುತ್ರ ನಾಗರಾಜ್ ಎಷ್ಟು ಬಾರಿ ಕೇಳಿದರೂ, ಪಂಚೆ ಹಾಕೊಂಡಿದ್ದಾರೆ, ಮಾಲ್ನಲ್ಲಿ ಪಂಚೆ ಹಾಕಿದವರನ್ನು ಬಿಡುವುದಿಲ್ಲ ಎಂದು ಸಿಬ್ಬಂದಿ ನಿರಾಕರಿಸಿದ್ದರು.
ಈ ಬಗ್ಗೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ವಿಧಾನಸಭೆಯಲ್ಲೂ ಪಕ್ಷಾತೀತವಾಗಿ ಸದಸ್ಯರು ಖಂಡಿಸಿ ಮಾಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ಆಸ್ತಿ ತೆರಿಗೆ ಬಾಕಿ ಕಾರಣ ನೀಡಿ ಮಾಲ್ ಸೀಜ್ ಮಾಡಿತ್ತು. ಘಟನೆಯ ಹಿನ್ನೆಲೆಯಲ್ಲಿ ಮಾಲ್‌ಗಳಿಗೆ ಮಾರ್ಗಸೂಚಿ ರಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರು ವಿಧಾನ ಸಭೆಯಲ್ಲಿ ಹೇಳಿದ್ದರು.
ಪ್ರತಿಭಟನೆ ಬೆನ್ನಲ್ಲೇ ಮಾಲ್ ಸಿಬ್ಬಂದಿ, ತಾವು ಮಾಡಿದ್ದು ತಪ್ಪು ಅಂತಾ ಒಪ್ಪಿಕೊಂಡು, ಪಂಚೆಯಲ್ಲೇ ಬಂದ ರೈತ ಫಕೀರಪ್ಪ ಅವರನ್ನು ಒಳಗಡೆ ಕರೆಯಿಸಿ ಸನ್ಮಾನಿಸಿ, ಕ್ಷಮೆಯಾಚಿಸಿದ್ದರು. ಪ್ರತಿಭಟನೆ ಸಂದರ್ಭದಲ್ಲಿ ಲುಂಗಿಯುಟ್ಟ ವೃದ್ಧರೊಬ್ಬರು ಮಾಲ್ ಒಳಗೆ ಹೋಗಿದ್ದು, ಸಿಬ್ಬಂದಿಯು ಅವರಿಗೆ ಕೈಮುಗಿದು, ಸೆಕ್ಯೂರಿಟಿ ಚೆಕ್ ಕೂಡ ಮಾಡದೇ ಒಳ ಬಿಟ್ಟಿದ್ದರು.
ಇದನ್ನೂ ನೋಡಿ: ನದಿಯಂತಾದ ರಸ್ತೆ : ಕುದುರೆ ಮುಖ ಕ್ರಾಸ್ ನಿಂದ ಜೋಕಟ್ಟೆ ಕಡೆಗೆ ತೆರಳುವ ರಸ್ತೆJanashakthi Media