ಮಡಿಕೇರಿ: ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮಳೆಯೂ ಮಂಗಳವಾರದಿಂದ ಮಧ್ಯಾಹ್ನದಿಂದ ಮತ್ತೆ ತೀವ್ರಗೊಂಡ ಪರಿಣಾಮವಾಗಿ ಕೊಡಗು ಜಿಲ್ಲೆಯಲ್ಲಿ ಹಲವು ಅವಾಂತರಗಳು ಸೃಷ್ಠಿಸಿವೆ. ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದಲ್ಲಿ ಹೆದ್ದಾರಿ ರಸ್ತೆಯೂ ಭೂಕುಸಿತವಾಗಿದೆ.
ಸುಂಟಿಕೊಪ್ಪ ಮತ್ತು ಸೋಮವಾರಪೇಟೆಗೆ ಸಂಪರ್ಕದ ರಾಜ್ಯ ಹೆದ್ದಾರಿಯ ಮಧ್ಯದಲ್ಲಿರುವ ಸ್ವಸ್ಥ ವಿಶೇಷ ಮಕ್ಕಳ ಶಾಲೆ ಬಳಿಗೆ ಭೂಕುಸಿತವಾಗಿದೆ. ಭೂಮಿಯ ಒಳಗೆ ಸುತ್ತ ಹದಿನೈದು ಅಡಿ ಅಗಲ ಹಾಗೂ 8 ಅಡಿ ಆಳದಷ್ಟು ಭೂಕುಸಿತ ಉಂಟಾಗಿದೆ.
ಇದನ್ನು ಓದಿ: ಸಚಿವಸ್ಥಾನಕ್ಕಾಗಿ ಶಾಸಕರ ಕಿತ್ತಾಟ – ಮಳೆಯಲ್ಲಿ ಅಸ್ತವ್ಯಸ್ತಗೊಂಡ ರಾಜ್ಯದ ಜನ
ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಕೊಡಗು ಪಿಡಬ್ಲ್ಯೂಡಿ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ಭೂಮಿಯೊಳಗೆ ಅಂತರ್ಜಲ ಹೆಚ್ಚಿದ ಪರಿಣಾಮವಾಗಿ ಭೂಕುಸಿತ ಉಂಟಾಗಿದ್ದು, ಅಪಾಯ ತಂದೊಡ್ಡಿದೆ ಎಂದು ಹೇಳಿದ್ದಾರೆ.
ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿರ್ಬಂಧಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಎದುರಾಗಿದೆ. ನೂರಾರು ಜನರು ಸುಂಟಿಕೊಪ್ಪಕ್ಕೆ ಎರಡು ಕಿಲೋಮೀಟರ್ ನಡೆದೇಕೊಂಡೇ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ತಕ್ಷಣವೇ ಜೆಸಿಬಿ ಬಳಸಿ ಕುಸಿದಿದ್ದ ಜಾಗದಲ್ಲಿ ಮಣ್ಣನ್ನು ಸಂಪೂರ್ಣ ತೆಗೆಯಲಾಗಿತ್ತು. ಆದರೆ ಮಣ್ಣು ತೆಗೆದಂತೆಲ್ಲಾ ಭೂಮಿಯೊಳಗಿಂದ ಅಂತರ್ಜಲ ಉಕ್ಕುತ್ತಿದೆ. ಕೆಸರಿನಂತಾಗಿದ್ದ ಮಣ್ಣನ್ನು ಸಂಪೂರ್ಣ ತೆಗೆದು ಅದರೊಳಕ್ಕೆ ಕಾಂಕ್ರಿಟ್ ಮಿಕ್ಸ್ ತುಂಬಲಾಗಿದೆ.
ಇದನ್ನು ಓದಿ: ಮಳೆಯ ಆರ್ಭಟ : ಕೊಡಗಿನಲ್ಲಿ ನಿಲ್ಲದ ಅವಾಂತರ
ಕಾಂಡನಕೊಲ್ಲಿಯಲ್ಲಿ ಚೋಂದಕ್ಕಿ ಎಂಬ ಮಹಿಳೆಯ ಮನೆ ಕುಸಿದು ಬಿದ್ದಿದೆ. ತೀವ್ರ ಮಳೆಯಿಂದಾಗಿ ಮಹಿಳೆ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುವಂತಾಗಿದೆ. ಅವರ ಮನೆ ಸಂಪೂರ್ಣ ಕುಸಿದು ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಒಂದು ತಿಂಗಳು ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನರಲ್ಲಿ ಮತ್ತಷ್ಟು ಆತಂಕ ಎದುರಾಗಿದೆ.
ವರದಿ: ಆರ್ವಿ ಹಸನ್