ಸ್ಯಾಂಕಿ ರಸ್ತೆ ಕುಸಿತ; ಮಲ್ಲೇಶ್ವರ 18ನೇ ಕ್ರಾಸ್ ಮಾರ್ಗ ಬಂದ್

ಬೆಂಗಳೂರು  : ನಗರದಲ್ಲಿ ಸುರಿದ ಭಾರೀ ಮಳೆಗೆ ಸ್ಯಾಂಕಿ ಕೆರೆ ರಸ್ತೆ ಮತ್ತೆ ಕುಸಿದಿದ್ದು, ಸದಾಶಿವ ನಗರ ಜಂಕ್ಷನ್‌ನಿಂದ ಮಲ್ಲೇಶ್ವರ 18 ಕ್ರಾಸ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಬಂದ್‌ ಮಾಡಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಸ್ಯಾಂಕಿ ಕೆರೆಯ ಏರಿಯ ಮೇಲಿನ ರಸ್ತೆ ಕುಸಿದಿತ್ತು. ಇದೀಗ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಮತ್ತೆ ಸ್ಯಾಂಕಿ ಕೆರೆ ರಸ್ತೆಯ ಒಂದು ಭಾಗ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ರಸ್ತೆಯ ಮೇಲೆ ಬಿದ್ದ ಮಳೆ ನೀರು ಹರಿದು ಹೋಗದೇ ಜಮಾವಣೆಗೊಂಡಿದ್ದರಿಂದ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ.

ಬಿಬಿಎಂಪಿಯಿಂದ ಕಳೆದ ಕೆಲವು ದಿನಗಳ ಹಿಂದೆ ಸ್ಯಾಂಕಿ ಕೆರೆ ರಸ್ತೆಗೆ ಹೊಸದಾಗಿ ಡಾಂಬರೀಕರಣ ಮಾಡಲಾಗಿತ್ತು. ರಸ್ತೆ ನೀರು ಹೊರ ಹೋಗುವ ಜಾಗಕ್ಕೆ ಡಾಂಬರ್‌ ಸುರಿದ ಪರಿಣಾಮ ನೀರು ರಸ್ತೆಯಲ್ಲಿಯೇ ನಿಂತಿದ್ದರಿಂದ ಪದೇ ಪದೆ ಕುಸಿಯುತ್ತಿದೆ. ಬಿಬಿಎಂಪಿಯು ಕುಸಿದ ರಸ್ತೆ ಗುಂಡಿಗೆ ಬೇಕಾಬಿಟ್ಟಿಕೋಲ್ಡ್‌ ಬಿಟುಮಿನ್‌ ಸುರಿದು ಮುಚ್ಚಿದ್ದು, ಕಳೆದ ಒಂದು ತಿಂಗಳ ಹಿಂದೆಯೂ ಇದೇ ರೀತಿ ಕಳೆದ ಕಾಮಗಾರಿ ಮಾಡಿ ಕುಸಿದ ಗುಂಡಿಗೆ ತೇಪೆ ಹಾಕಲಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಮತ್ತೆ ರಸ್ತೆ ಕುಸಿದಿದೆ.

ಕೇವಲ ಎರಡು ತಿಂಗಳಲ್ಲಿ ಕೆರೆಯ ದಂಡೆಯ ಮೇಲಿನ ರಸ್ತೆ ಎರಡು ಬಾರಿ ಕುಸಿದಿದ್ದರೂ ಬಿಬಿಎಂಪಿ ಅಧಿಕಾರಿಗಳು ಕುಸಿತಕ್ಕೆ ಕಾರಣ ಪತ್ತೆ ಹಚ್ಚದೇ ಬೇಕಾಬಿಟ್ಟಿಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಕುಸಿದ ಗುಂಡಿ ಮುಚ್ಚದೇ ನಿರ್ಲಕ್ಷ್ಯ ವಹಿಸಿದರೆ ಸ್ಯಾಂಕಿ ಕೆರೆಯ ದಂಡೆಗೆ ಸಂಚಕಾರ ಎದುರಾಗಬಹುದು. ಹಾಗಾಗಿ, ಮುನ್ನೆಚ್ಚರಿಕೆ ವಹಿಸಿ ಕುಸಿದ ರಸ್ತೆಯನ್ನು ಕೂಡಲೇ ಸರಿ ಪಡಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

Donate Janashakthi Media

Leave a Reply

Your email address will not be published. Required fields are marked *