ಮಳವಳ್ಳಿ | ಹಕ್ಕುಪತ್ರ ಕೇಳಿದವರ ಮೇಲೆ ಪೊಲೀಸ್ ದೌರ್ಜನ್ಯ, ಮುಂದುವರೆದ ಪ್ರತಿಭಟನೆ

ಮಂಡ್ಯ: ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ನಡೆದ ಧರಣಿಯ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಮಲ್ಲಿಕ್ಯಾತನಹಳ್ಳಿ ನಿವಾಸಿಗಳು ತಾಲೂಕು ಕಚೇರಿ ಮುಂಬಾಗ ಹಕ್ಕುಪತ್ರ ಬೇಡಿಕೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪರಿಹಾರಕ್ಕಾಗಿ ನಡೆಸಿದ ಧರಣಿಯ ವೇಳೆ ಈ ಘಟನೆ ನಡೆದಿದೆ.

ತಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ನಡೆಸುವುದಾಗಿ ಅನಿರ್ಧಿಷ್ಠಾವಧಿ ಧರಣಿ ಕೂತಿದ್ದ ಜನರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತರ ನಡುವೆ ಘರ್ಷಣೆ ನಡೆದಿದೆ. ಆದರೆ ಪೊಲೀಸರ ದೌರ್ಜನ್ಯಕ್ಕೆ ಜಗ್ಗದ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: ಮನಸೋ ಇಚ್ಛೆ ವಿದ್ಯಾರ್ಥಿಗಳನ್ನು ಥಳಿಸಿದ ವಾರ್ಡ್‌ನ – ಎಸ್ ಎಫ್ ಐ ಪ್ರತಿಭಟನೆ

ಮಲ್ಲಿಕ್ಯಾತನಹಳ್ಳಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ, ಮೂಗನಕೊಪ್ಪಲು ಗ್ರಾಮದ ಗ್ರಾಮಠಾಣಾ ಜಾಗದ ಹದ್ದುಬಸ್ತು ನಿಗಧಿ ಮಾಡುವಂತೆ, ಮಳವಳ್ಳಿ ಟೌನ್ 7ನೇ ವಾರ್ಡ್ನ ನಿವಾಸಿಗಳಿಗೆ ರಸ್ತೆ, ಚರಂಡಿ, ಯು.ಜಿ.ಡಿ. ಸೌಲಭ್ಯಕ್ಕೆ ಒತ್ತಾಯಿಸಿ ಹಾಗೂ ತಾಲ್ಲೂಕು ಕಛೇರಿಯ ಅಸಮರ್ಪಕ ಕಾರ್ಯನಿರ್ವಹಣೆ ವಿರೋಧಿಸಿ ಪ್ರತಿಭಟನೆ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು.

ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಹೋರಾಟಗಾರರು, “ಮಳವಳ್ಳಿ ತಾಲ್ಲೂಕಿನ ಮಲ್ಲಿಕ್ಯಾತನಹಳ್ಳಿ ಗ್ರಾಮದ ಸ.ನಂ. 369 ಹಾಗೂ 375ರಲ್ಲಿ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸದ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ ಸರ್ಕಾರ ಅವರಿಗೆ ಈ ವರೆಗೆ ಹಕ್ಕು ಪತ್ರ ನೀಡದೆ ಸತಾಯಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂಬಂಧಿಕರ ಮನೆಗೆ ಲೋಕಾಯುಕ್ತ ದಾಳಿ

“ಗ್ರಾಮ ಪಂಚಾಯಿತಿ, ತಾಲ್ಲೂಕು ಕಛೇರಿ ಹಾಗೂ ಜನಪ್ರತಿನಿಧಿಗಳಿಗೆ ನೂರಾರು ಬಾರಿ ಲಿಖಿತ ಮನವಿ ಸಲ್ಲಿಸಲಾಗಿದೆ. ಅಲ್ಲದೆ, 94ಸಿ ಅಡಿಯಲ್ಲಿ ಅರ್ಜಿ ಕೂಡಾ ಸಲ್ಲಿಸಿದ್ದೇವೆ. ಆದರೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಇಲ್ಲಿ ಯಾರು ವಾಸವಿರುವುದಿಲ್ಲವೆಂದು ಸುಳ್ಳು ವರದಿ ನೀಡಿ ಮೋಸ ಮಾಡಿದ್ದಾರೆ. ಹಾಗಾಗಿ 94ಸಿ ಅರ್ಜಿಗಳು ತಿರಸ್ಕೃತವಾಗಿದೆ. ಇವರ ಮೋಸದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ” ಎಂದು ಅವರು ಹೇಳಿದ್ದಾರೆ.

“ಈ ಬಗ್ಗೆ ನಾಲ್ಕಾರು ಬಾರಿ ಮಳವಳ್ಳಿ ತಹಶೀಲ್ದಾರ್‌ರಿಗೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಮ್ಮ ಬೇಡಿಕೆ ಈಡೇರುವವರೆಗೆ ಅನಿರ್ಧಿಷ್ಠಾವಧಿ ಧರಣಿ ಕೂತಿದ್ದೇವೆ” ಎಂದು ಅವರು ಹೇಳಿದ್ದಾರೆ. ಇಷ್ಟೆ ಅಲ್ಲದೆ, ಇನ್ನೂ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಈ ಧರಣಿ ನಡೆಸಲಾಗುತ್ತಿದೆ ಎಂದು ಅವರು ಜನಶಕ್ತಿ ಮೀಡಿಯಾಗೆ ಹೇಳಿದರು.

ವಿಡಿಯೊ ನೋಡಿ: ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು : ಸದಾಗ್ರಹದ ಸಭೆ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *