ಮಳವಳ್ಳಿ : ದೇಶದ ಬೆನ್ನೆಲುಬು ರೈತ ಅನ್ನದಾತ ಎಂದು ಬಿಂಬಿಸುವ ಸರ್ಕಾರಗಳು ರೈತನ ಬದುಕನ್ನ ದಿವಾಳಿ ಮಾಡುತ್ತಿವೆ, ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ, ನೀರಾವರಿ, ಬ್ಯಾಂಕ್ ಸಾಲ, ಸಬ್ಸಿಡಿ, ಮಾರುಕಟ್ಟೆ ವ್ಯವಸ್ಥೆ ಮುಂತಾದ ಸೌಲಭ್ಯಗಳಿಲ್ಲದೆ ರೈತ ಕ೦ಗಾಲಾಗಿ ಸಾಲದ ಸುಳಿಯಲ್ಲಿ ಸಿಕ್ಕಿ ಸಾಯುವಂತಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ತಿಳಿಸಿದರು.
ಅವರು ಸಂಯುಕ್ತ ಕಿಸಾನ್ ಮೋರ್ಚಾ ಕರೆಯ ಮೇರೆಗೆ ಇಂದು ಮಳವಳ್ಳಿ ಯಲ್ಲಿ ಪ್ರಾಂತ ರೈತ ಸಂಘ ಜನವಾದಿ ಮಹಿಳಾ ಸಂಘಟನೆ, ದಲಿತ, ಕಾರ್ಮಿಕ ಸಂಘಟನೆಗಳು ಆಯೋಜಿಸಿದ್ದ ಟ್ರ್ಯಾಕ್ಟರ್ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡುತ್ತ ಹೈನುಗಾರಿಕೆ, ರೇಷ್ಮೆ, ಕಬ್ಬು, ಭತ್ತ ಜೋಳ, ಮುಂತಾದ ಬೆಳೆಗಾರರಿಗೆ ಆದಾಯಕ್ಕಿಂತ ಖರ್ಚೆ ಹೆಚ್ಚಾಗುತ್ತಿದೆ. ಕಾರ್ಪೋರೇಟ್ ತೋಳಗಳು ನರಬೇಟೆಗೆ ಇಳಿದಿವೆ. ಆಳುವ ಸರ್ಕಾರಗಳೇ ನರಬಲಿಯ ನೇತೃತ್ವ ವಹಿಸಿದೆ. ನಮ್ಮ ಭೂಮಿ, ಬೆಳೆ, ಬೆವರು ಮತ್ತು ಬದುಕೆಲ್ಲವನ್ನು ಕಬಳಿಸಲು ಕ್ರಿಮಿನಲ್ ಕಾರ್ಪೋರೇಟ್ ಕಂಪನಿಗಳು ಹಾತೊರೆಯುತ್ತಿವೆ, ಎಂದು ಆರೋಪಿಸಿದರು.
ಕೇಂದ್ರ – ರಾಜ್ಯ ಸರ್ಕಾರಗಳು ರೈತ ವಿರೋಧಿ, ಸಮಸ್ತ ಜನ ವಿರೋಧಿಯಾದ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಮರಣ ಶಾಸನಕ್ಕೆ ಸಹಿ ಹಾಕಿವೆ. ಜನಸಾಮಾನ್ಯರಿಗೆ ಅರ್ಥವಾಗದಂತೆ ರಚಿಸಿರುವ ಕಾಯ್ದೆಗಳನ್ನು ಸರಳವಾಗಿ ಅರ್ಥೈಸಿ ಹೇಳಬೇಕೆಂದರೆ ‘ಉಳುವವನೇ ಭೂಮಿ ಒಡೆಯ” ಎಂಬುವುದು ಹೋಗಿ, “ಉಳ್ಳವರೇ ಭೂ ಒಡೆಯರು”, ದೇಶದ ತುಂಬಾ ಬಕಾಸುರ ಗೋದಾಮುಗಳು ಕಂಪನಿಗಳದೇ ಮಂಡಿ, ರೈತರಿಗೆ ಅವರು ಕೊಟ್ಟಿದ್ದೇ ರೇಟು, ಕಾಸಿದ್ದನ್ನು ಕರೆಂಟು, ಹೇಳಿದ್ದೇ ಬೆಲೆ, ಕಾರ್ಮಿಕರೆಲ್ಲ ಗುಲಾಮರು, ಅಬಾನಿ-ಅಂಬಾನಿಗಳೇ ಈ ದೇಶದ ಮಾಲಿಕರು ಇಂತಹ ನೀತಿಗಳ ವಿರುದ್ದ ಬೃಹತ್ ರೈತ ಹೋರಾಟ ರೂಪಿಸಬೇಕೆಂದು ಕರೆ ನೀಡಿದರು.
ಅರವತ್ತು ವರ್ಷ ತುಂಬಿದ ಎಲ್ಲಾ ರೈತರಿಗೆ ಕನಿಷ್ಠ 5000/- ರೂ. ಮಾಸಿಕ ಪಿಂಚಣಿ ವ್ಯವಸ್ಥೆ ಜಾರಿಮಾಡಬೇಕು ರೈತರ ಪಂಪ್ ಸೆಟ್ ಗಳಿಗೆ ಪ್ರೀಪೇಡ್ ಮೀಟರ್ ಆಳವಡಿಸಿ ರೈತ ಕುಲ ನಾಶಪಡಿಸುತ್ತಿದ್ದಾರೆ ಅತಿವೃಷ್ಟಿ-ಅನಾವೃಷ್ಟಿ, ಬೆಳೆ ರೋಗಗಳು ಇತ್ಯಾದಿಗಳಿಂದಾದ ನಷ್ಟವನ್ನು ಸರಿದೂಗಿಸಲು ಸರ್ಕಾರ ಎಲ್ಲಾ ಬೆಳೆಗಳಿಗೆ ಸಮಗ್ರ ಮತ್ತು ಪರೀಣಾಮಕಾರಿ ಬೆಳೆವಿಮೆಯನ್ನು ಜಾರಿಗೊಳಿಸಬೇಕು ಪ್ರತಿ ಟನ್ ಕಬ್ಬಿಗೆ 5000/-ರೂ. ಬೆಲೆ ನಿಗದಿ ಪಡಿಸಬೇಕು ಮತ್ತು ವರ್ಷಕ್ಕೆ ಸರಿಯಾಗಿ ಕಟಾವು ಮಾಡಿಕೊಂಡು 15 ದಿನಗಳೊಳಗೆ ಹಣ ಪಾವತಿಸಬೇಕು. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 50-00ರೂ. ಬೆಲೆ ನಿಗದಿಪಡಿಸಿ, ಮನ್ ಮುಲ್‌ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಬೇಕು. ರೈತರ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆ ಕನಿಷ್ಠ 8 ಗಂಟೆ ಗುಣಮಟ್ಟದ ವಿದ್ಯುತ್ ನೀಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ತಕ್ಷಣ ಸಾಗುವಳಿ ಪತ್ರ ನೀಡಬೇಕು. ಕಾಡುಪ್ರಾಣಿಗಳಾದ ಆನೆ, ಹಂದಿ, ಚಿರತೆ, ಸಾರಂಗಗಳ ದಾಳಿಗಳನ್ನು ತಡೆಗಟ್ಟಿ ರೈತರು ಹಾಗೂ ರೈತರ ಬೆಳೆಗಳನ್ನು ರಕ್ಷಿಸಬೇಕು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳ ದೌರ್ಜನ್ಯ ತಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅದ್ಯಕ್ಷರಾದ ಎನ್ ಎಲ್ ಭರತ್ ರಾಜ್ ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ ಚಿಕ್ಕಸ್ವಾಮಿ. ಹಿಪ್ಜುಲ್ಲಾ . ಗುರುಸ್ವಾಮಿ ಶಿವಪ್ಪ. ಮರಿಲಿಂಗೌಡ ಅನೀತಾ ಸುನೀತಾ ಸುಶೀಲಾ ಶಿವಕುಮಾರ್ ಗಣೇಶ್ ಮಹಾದೇವು ಸತೀಶ್ ಮೂರ್ತಿ ಪ್ರಕಾಶ್ ಸಿದ್ದರಾಜ್ ಮುಂತಾದವರು ಭಾಗವಹಿಸಿದ್ದರು.