ಮಹಿಳೆಯರು ಭಾಗವಹಿಸದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ: ಎಸ್ ವರಲಕ್ಷ್ಮಿ

ಮಂಗಳೂರು: ದೇಶದ ಜನಸಂಖ್ಯೆಯಲ್ಲಿ ಅರ್ಧ ಭಾಗದಷ್ಟು ಮಹಿಳೆಯರಿದ್ದರೂ ಮಹಿಳಾ ಸಬಲೀಕರಣದ ಪ್ರಶ್ನೆ ಮುಂಚೂಣಿಗೆ ಬರುತ್ತಿಲ್ಲ. ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರನ್ನು ಅತ್ಯಂತ ಕೀಳಾಗಿ ಕಾಣುತ್ತಾ, ಭೋಗದ ವಸ್ತುವನ್ನಾಗಿಸಿ, ನಾಲ್ಕು ಗೋಡೆಗಳ ಮದ್ಯೆ ಬಂಧಿಯನ್ನಾಗಿಸಿದೆ. ಸಮಾಜದಲ್ಲಿ ನಡೆಯುತ್ತಿರುವ ಎಲ್ಲಾ ಅನಿಷ್ಟಗಳಿಗೆ ಮಹಿಳೆಯರನ್ನೇ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಇವೆಲ್ಲವನ್ನೂ ಮೀರಿ ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಸಾಮಾಜಿಕ ಆರ್ಥಿಕ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಇರಬೇಕು. ಒಟ್ಟಿನಲ್ಲಿ ಮಹಿಳೆಯರು ಭಾಗವಹಿಸದೆ ದೇಶದ ಅಭಿವೃದ್ಧಿ ಖಂಡಿತಾ ಸಾಧ್ಯವಿಲ್ಲ ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು), ಕರ್ನಾಟಕ ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ ತಿಳಿಸಿದರು.

ಇದನ್ನು ಓದಿ: ಮಹಿಳಾ ಲೋಕದೃಷ್ಟಿಯನ್ನು ಒಟ್ಟು ಸಮಾಜದ ಲೋಕದೃಷ್ಟಿಯಾಗಿಸಬೇಕು

ಅವರು ಇಂದು(ಮಾರ್ಚ್‌ 08, 2023) ನಗರದ ದಕ್ಷಿಣ ಕನ್ನಡ ಜಿಲ್ಲೆಯ ಮಲ್ಲಿಕಟ್ಟೆಯಲ್ಲಿರುವ ಸುಮಾ ಸದನದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು. ದುಡಿಯುವ ಮಹಿಳೆಯರ ಸಮನ್ವಯ ಸಮಿತಿ(ಸಿಐಟಿಯು) ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಜೆಎಂಎಸ್‌)ಯ ಜಂಟಿ ಆಶ್ರಯದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ) ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೆಎಂಎಸ್‌ ಜಿಲ್ಲಾಧ್ಯಕ್ಷೆ ಜಯಂತಿ ಶೆಟ್ಟಿ ಮಾತನಾಡುತ್ತಾ, ದುಡಿಯುವ ಮಹಿಳೆಯರ ಪ್ರಶ್ನೆಯಲ್ಲಿ ಹುಟ್ಟಿಕೊಂಡ ಚಳುವಳಿ ಜಗತ್ತಿನಾದ್ಯಂತ ಹಬ್ಬಿಕೊಂಡು, ಮಹಿಳಾ ಸ್ವಾತಂತ್ರ್ಯ, ಸಮಾನತೆ, ಸಬಲೀಕರಣದ ವಿಚಾರ ಪ್ರಧಾನವಾಗಿ ಬೆಳಕಿಗೆ ಬಂದು ಬಳಿಕ ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸಲ್ಪಟ್ಟಿತು. ಆದರೆ ಇಂದು ಮತ್ತೆ ಮಹಿಳೆಯರನ್ನು ಗುಲಾಮರನ್ನಾಗಿಸುವ ಕುತಂತ್ರ ನಡೆಯುತ್ತಿದೆ ಎಂದು ಹೇಳಿದರು.

ಇದನ್ನು ಓದಿ: ಮಹಿಳೆ: ನೆತ್ತಿಯ ಮೇಲೆ ಎಷ್ಟೊಂದು ನಿರ್ಬಂಧಗಳು

ಸಭೆಯ ಅಧ್ಯಕ್ಷತೆ ವಹಿಸಿದ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕಿ ಪದ್ಮಾವತಿ ಶೆಟ್ಟಿ ಮಾತನಾಡಿ, ಒಂದು ಕಡೆ ಮಹಿಳೆಯರನ್ನು ಮಾತೆಯರೆಂದು ಕೊಂಡಾಡುತ್ತಾ ಮತ್ತೊಂದು ಕಡೆ ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ, ಅತ್ಯಾಚಾರ ಪ್ರಕರಣಗಳು ಪ್ರತಿನಿತ್ಯ ಹೆಚ್ಚಾಗುತ್ತಿದೆ. ದೇಶವನ್ನಾಳುವ ಸರಕಾರಗಳು ದಿವ್ಯಮೌನ ವಹಿಸುವ ಮೂಲಕ ತಾನು ಮಹಿಳಾ ವಿರೋಧಿಯೆಂದು ಸಾಬೀತುಪಡಿಸಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಜೆಎಂಎಸ್‌ ಜಿಲ್ಲಾ ನಾಯಕರಾದ ಭಾರತಿ ಬೋಳಾರ, ರಾಧಾ ಮೂಡಬಿದ್ರಿ, ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ನಾಯಕರಾದ ಗಿರಿಜಾ, ಜಯಲಕ್ಷ್ಮಿ, ಯುವತಿಯರ ಉಪಸಮಿತಿ ಸಂಚಾಲಕಿ ಆಶಾ ಬೋಳೂರು, ವಿದ್ಯಾರ್ಥಿನಿಯರ ಉಪಸಮಿತಿ ನಾಯಕಿ ಶಿವಾನಿ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಜಿಲ್ಲಾ ಮುಖಂಡ ಯೋಗೀಶ್ ಜಪ್ಪಿನಮೊಗರು, ಸಿಐಟಿಯು ಮುಖಂಡರಾದ ವಸಂತಿ ಕುಪ್ಪೆಪದವು, ಭವಾನಿ ವಾಮಂಜೂರು, ಪುಷ್ಪ, ಲಕ್ಷ್ಮಿ, ವಾರಿಜಾ, ಜೆಎಂಎಸ್ ನಾಯಕರಾದ ಲೋಲಾಕ್ಷಿ ಬಂಟ್ವಾಳ, ವಿಲಾಸಿನಿ ತೊಕ್ಕೊಟ್ಟು, ಪ್ರಮೀಳಾ ಶಕ್ತಿನಗರ,‌ ಅಸುಂತ ಡಿಸೋಜ, ಸಾಮಾಜಿಕ ಚಿಂತಕರಾದ ಕ್ವೀನಿ ಪರ್ಸಿ ಆನಂದ್, ಫ್ಲೇವಿ ಕ್ರಾಸ್ತಾ, ಶಾಂತಿ ಡಯಾಸ್, ಆಶಾ ಸಂಜೀವನಾ ಮುಂತಾದವರು ಹಾಜರಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *