ಬೆಂಗಳೂರು: ಮೈಸೂರಿನ ಅತ್ಯಾಚಾರ ಪ್ರಕರಣದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ, ಗೃಹ ಸಚಿವರ ಹೊಣೆಗೇಡಿ ಹೇಳಿಕೆ ವಿರೋಧಿಸಿ, ಜಸ್ಟೀಸ್ ವರ್ಮಾ ಕಮಿಟಿಯ ಶಿಫಾರಸುಗಳನ್ನು ಜಾರಿ ಮಾಡಬೇಕು ಮತ್ತು ರಾಜ್ಯದ ಉಗ್ರಪ್ಪ ಸಮಿತಿ ವರದಿಯನ್ನು ಅಂಗೀಕರಿಸಬೇಕೆಂದು ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಲಾಯಿತು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್.ವಿಮಲಾ ಮಾತನಾಡಿ ʻಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸರಕಾರಗಳು ವಿಫಲವಾಗಿವೆ. ಜಸ್ಟೀಸ್ ವರ್ಮಾ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲು ಸರಕಾರಗಳು ನಿರ್ಲಕ್ಷ್ಯವಹಿಸಿವೆ. ಕರ್ನಾಟಕದಲ್ಲಿ ಉಗ್ರಪ್ಪ ನೇತೃತ್ವದಲ್ಲಿ ಸಮಿತಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಅಗತ್ಯವಾದ ಶಿಫಾರಸ್ಸುಗಳನ್ನು ಸರಕಾರಕ್ಕೆ ಕೊಟ್ಟು ಮೂರು ವರ್ಷಗಳೇ ಕಳೆದಿದ್ದರೂ ಇದುವರೆಗೆ ಸರಕಾರ ಅದರತ್ತ ಕಣ್ಣೆತ್ತಿಯೂ ನೋಡಿಲ್ಲ. ಈಗಲಾದರು ಅತ್ತ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಮೈಸೂರಿನ ಅತ್ಯಾಚಾರದ ಪ್ರಕರಣದ ಸಂದರ್ಭದಲ್ಲಿ ರಾಜ್ಯದ ಗೃಹ ಸಚಿವರು ಹೆಣ್ಣುಮಕ್ಕಳು ರಾತ್ರಿವೇಳೆ ಹೊರಗೆ ಹೋಗಬಾರದೆಂದು, ಏಳು ಘಂಟೆಯ ಹೊತ್ತಿಗೆ ಆಕೆ ಅಲ್ಲಿಗೆ ಹೋಗಬಾರದಿತ್ತು ಎನ್ನುವ ಹೊಣೆಗೇಡಿತನದ ಮಾತುಗಳನ್ನಾಡಿದ್ದನ್ನು ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ತಾಲಿಬಾನ್ ರೀತಿಯ ನಡವಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಸಂಘಟನೆಯ ಜಿಲ್ಲಾ ಸಂಚಾಲಕಿ ಬಸಮ್ಮ ಮಾತನಾಡಿದರು.