ಬೆಂಗಳೂರು: ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಮೌರ್ಯ ವಿರುದ್ಧ ಮಾನಹಾನಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣದಡಿ ವೆಂಕಟೇಶ್ ಮೌರ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯನೂ ಆಗಿರುವ ವೆಂಕಟೇಶ್ ಮೌರ್ಯ ಭೋವಿ ಸಮುದಾಯದ ಮಹಿಳೆಯರ ವಿರುದ್ಧ ಅಪಪ್ರಚಾರದ ಸಂದೇಶಗಳನ್ನು ಹರಿಬಿಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಆತನ ವಿರುದ್ಧ ಮಹಿಳೆಯರು ಗಲಾಟೆ ನಡೆಸಿದ್ದರು. ಪ್ರಶ್ನೆ ಮಾಡಿದ ಮಹಿಳೆಯರ ಮೇಲೆ ಹಲ್ಲೆ ಮಾಡಿದ ವೆಂಕಟೇಶ್ ಮೌರ್ಯ ನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಭೋವಿ ಸಮುದಾಯದ ಮಹಿಳೆಯರ ವಿರುದ್ಧ ಅಪಪ್ರಚಾರ ಮಾಡಿ ತೇಜೋವಧೆ ಮಾಡಿದ್ದು, ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪಗಳು ಇವೆ. ಈ ಸಂಬಂಧ ವೆಂಕಟೇಶ್ ಮೌರ್ಯನನ್ನು ನಿನ್ನೆ ರಾತ್ರಿ ಮಹಿಳೆಯರು ತರಾಟೆ ತೆಗೆದುಕೊಂಡಿದ್ದರು. ಅಲ್ಲದೆ ಮಹಿಳೆಯೊಬ್ಬಳಿಗೆ ಸ್ವಾಮೀಜಿ ಕೇಕ್ ತಿನ್ನಿಸುತ್ತಿರುವ ಫೋಟೋವನ್ನು ವೈರಲ್ ಮಾಡಲಾಗಿದೆ. ಜೊತೆಗೆ ಭೋವಿ ಸಮಾಜದ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿಬಿಟ್ಟು, ಮಹಿಳೆಯ ಬಗ್ಗೆ ಅಪಪ್ರಚಾರ ಮಾಡಿರುವ ಆರೋಪಗಳು ಕೇಳಿ ಬಂದಿದೆ.
ಶನಿವಾರ ರಾತ್ರಿ ಅರಮನೆ ಮೈದಾನದ ಬಳಿ ಹೋದ ಮಹಿಳೆಯರು ಆರೋಪಿ ವೆಂಟಕೇಶ್ ಮೌರ್ಯನನ್ನು ಪ್ರಶ್ನೆ ಮಾಡಿದ್ದಾರೆ. ಈ ಸಮಯದಲ್ಲಿ ವಾಗ್ವಾದ ನಡೆದು ಆರೋಪಿ ವೆಂಕಟೇಶ್ ಮೌರ್ಯ, ದೀಪಾ ಎಂಬವರಿಗೆ ಕಾಲಿನಿಂದ ಒದ್ದು, ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಬಳಿಕ ಸ್ಥಳಕ್ಕಾಗಮಿಸಿದ ಸದಾಶಿವನಗರ ಪೊಲೀಸರು ವೆಂಕಟೇಶ್ ಮೌರ್ಯರನ್ನು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ತುಳಸಿ ರಮೇಶ್ ಮತ್ತು ದೀಪಾ ಎಂಬುವರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸ್ವಾಮೀಜಿ ಕಡೆಯವರು ಬಂದು ವೆಂಕಟೇಶ್ ಮೌರ್ಯ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದು ತನ್ನ ವಿರುದ್ಧ ಮಾಡಲಾಗುತ್ತಿರುವ ಸುಳ್ಳು ಆರೋಪಗಳಾಗಿವೆ ಎಂದು ವೆಂಕಟೇಶ್ ಮೌರ್ಯ ಹೇಳುತ್ತಿದ್ದಾರೆ. ಸದ್ಯ ಇಬ್ಬರ ಕಡೆಯಿಂದಲೂ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿವೆ. ದೂರಿನ ಮೇರೆಗೆ ಪೊಲೀಸರು ಈಗಾಗಲೇ ಮಹಿಳೆಯರು ಮತ್ತು ವೆಂಕಟೇಶ್ ಮೌರ್ಯನನ್ನ ವಿಚಾರಣೆಗೆ ಗುರಿಪಡಿಸಿದ್ದಾರೆ.
ಸದಾಶಿವನಗರ ಪೊಲೀಸ್ ಠಾಣೆ ಮುಂದೆ ವಾಗ್ವಾದ ನಡೆದಿದ್ದು, ವೆಂಕಟೇಶ್ ಮೌರ್ಯ ಪರ ವಕೀಲ ಜಗನ್ನಾಥ್ ಅವರನ್ನು ತರಾಟೆ ತೆಗೆದುಕೊಂಡ ಮಹಿಳೆಯರು, ಅಂತವನಿಗೆ ಬೆಂಬಲ ಮಾಡುತ್ತೀರಾ, ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಈ ರೀತಿ ಆದರೆ ಸುಮ್ಮನಿರುತ್ತೀರಾ?, ಅಂತವನಿಗೆ ಬುದ್ದಿ ಹೇಳೋದು ಬಿಟ್ಟು ಈ ರೀತಿ ಅವರ ಪರ ವಹಿಸಿಕೊಂಡು ಮಾತನಾಡುತ್ತೀರಾ ಎಂದು ಗಲಾಟೆ ಮಾಡಿದ್ದಾರೆ.