ಹುಬ್ಬಳ್ಳಿ: ಮಹಿಳೆಯರ ಆತ್ಮರಕ್ಷಣೆಗಾಗಿ ತರಬೇತಿ ನೀಡುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕೆಎಸ್‌ಆರ್‌ಪಿ ಪಡೆ ಹಾಗೂ ಪೊಲೀಸ್ ತರಬೇತಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ ನಿವೃತ್ತ ಅಧಿಕಾರಿಗಳ ಸೇವೆ ಹಾಗೂ ಅನುಭವವನ್ನು ಬಳಸಿಕೊಂಡು ಈ ತರಬೇತಿಯನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ಹಳೇ ಸಿ.ಆರ್. ಮೈದಾನದಲ್ಲಿ ಆಯೋಜಿಸಲಾದ ‘ಪೋಲಿಸ್ ಸಂಸ್ಮರಣಾ ದಿನಾಚರಣೆ’ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ʻʻದೇಶದ ಎಲ್ಲಾ ಹಂತದ ಪೊಲೀಸರು ಜನರು ಭಯರಹಿತ ಜೀವನ ನಡಿಸಲು ಶ್ರಮ ಪಡುತ್ತಾರೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ, ವಿದೇಶದಿಂದ ಎದುರಾಗುವ ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸುತ್ತಾರೆ. ನಾಗರಿಕರು ಕಾನೂನು ಕಾಪಾಡುವಲ್ಲಿ ಪೊಲೀಸರಿಗೆ ಸಹರಿಸಬೇಕು. ಪೊಲೀಸರು ಕುಟುಂಬವನ್ನು ಮರೆತು ಹಗಲಿರುಳು ದುಡಿಯುತ್ತಾರೆ” ಎಂದು ಶ್ಲಾಘಿಸಿದರು.
ಇದನ್ನು ಓದಿ: ಭಾರೀ ಮಳೆ: ಪಿಣರಾಯಿ ವಿಜಯನ್ ಅವರೊಂದಿಗೆ ಬೊಮ್ಮಾಯಿ ಮಾತುಕತೆ-ಕಾರ್ಯಾಚರಣೆಯ ನೆರವಿನ ಭರವಸೆ
ಪೊಲೀಸರ ಸೇವೆಯನ್ನು ಉತ್ತಮಗಳೊಳಿಸಲು ಎಲ್ಲಾ ಪ್ರಯತ್ನ ಮಾಡಿದ್ದೇವೆ. ಕಳೆದೆರಡು ವರ್ಷಗಳಲ್ಲಿ ಅತಿ ಹೆಚ್ಚು ಮುಂಬಡ್ತಿ ನೀಡಲಾಗಿದೆ. ಅವರಿಗೆ ನೈರ್ತಿಕ ಸ್ಥೈರ್ಯ ತುಂಬುವ ಅವಶ್ಯಕತೆ ಇದೆ. 16 ಸಾವಿರ ಪೊಲೀಸರ ನೇಮಕಾತಿಗೆ ಕ್ರಮಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಪೊಲೀಸರಿಗೆ ದೊರಕಬೇಕಾದ ಸವಲತ್ತುಗಳನ್ನು ನೀಡಲು ಸರ್ಕಾರ ಸಿದ್ಧವಿದೆ. ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವ ಹಲವು ಯೋಜನೆಗಳನ್ನು ಮರು ಪ್ರಾರಂಭಿಸಿದ್ದೇವೆ. ಪೊಲೀಸರ ಸೇವೆ ಉತ್ತಮಗೊಳಿಸಲು ಪ್ರಯತ್ನ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಹಂತದಲ್ಲಿ ಮಾತ್ರ ಪದೋನ್ನತಿ ಎಂಬ ಭಾವನೆ ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇತ್ತು. ಆದರೆ ಕೆಳ ಹಂತದ ಸಿಬ್ಬಂದಿಗೆ ಪದೋನ್ನತಿ ನೀಡಲಾಗಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅನೇಕ ಯುವಜನರು ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ತಡೆಗಾಗಿ ಕಾಯ್ದೆಯನ್ನು ತರಲಾಗಿದೆ. ಗ್ಯಾಂಬ್ಲಿಂಗ್ ಕ್ಲಬ್‌ಗಳ ವಿರುದ್ಧ ಸಶಕ್ತ ಕಾನೂನು ತರಲಾಗಿದೆ. ಎಫ್‌ಎಸ್‌ಎಲ್ ಲ್ಯಾಬ್‌ಗಳನ್ನು ಪ್ರಾದೇಶಿಕ ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
“ಈಗಾಗಲೇ 10 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷದಲ್ಲಿ 11 ಸಾವಿರ ಮನೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಆರೋಗ್ಯ ಭಾಗ್ಯ, ವೇತನ ಪರಿಷ್ಕರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿಧಾನ್ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಹುಡಾ ಆಯುಕ್ತ ನಾಗೇಶ್ ಕಲಬುರ್ಗಿ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರತಾಪ್ ರೆಡ್ಡಿ, ಶಾಸಕ ಪ್ರಸಾದ್ ಅಬ್ಬಯ್ಯ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೇರಿದಂತೆ ಇತರೆ ಗಣ್ಯರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿದರು.
ಕೇರಳ ಪ್ರವಾಹಕ್ಕೆ ಸ್ಪಂದನೆ
ಕೇರಳ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಆಗಿರುವ ಸಂಕಷ್ಟಕ್ಕೆ ರಾಜ್ಯದ ಜನತೆ ಹಾಗೂ ಕರ್ನಾಟಕ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ, ಸಹಕಾರವನ್ನು ಒದಗಿಸಲಾಗುವುದು. ಅಲ್ಲದೆ ಉತ್ತರಾಖಂಡದಲ್ಲಿಯೂ ಭಾರೀ ಮಳೆಗೆ ಭೂಕುಸಿತ ಸಂಭವಿಸುತ್ತಿದೆ. ಅಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಿಗೆ ನೆರವು ಒದಗಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದರು.