ಬೃಹತ್ ಐಟಿ ದಾಳಿ : 390 ಕೋಟಿ ರೂ. ಬೇನಾಮಿ ಆಸ್ತಿ ಪತ್ತೆ

ಮುಂಬೈ: ಮಹಾರಾಷ್ಟ್ರದಲ್ಲಿ ಬೃಹತ್ ಐಟಿ ದಾಳಿಯಾಗಿದ್ದು, ಉಕ್ಕು ತಯಾರಕರ ಕಾರ್ಖಾನೆಗಳು, ಮನೆಗಳು ಮತ್ತು ಕಚೇರಿಗಳ ಮೇಲೆ ರೈಡ್​ ನಡೆಸಲಾಗಿದ್ದು, ಸುಮಾರು 390 ಕೋಟಿ ಮೌಲ್ಯದ ಲೆಕ್ಕವಿರದ ಆಸ್ತಿ ಪತ್ತೆ ಮಾಡಿದೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದ ಜಲ್ನಾದಲ್ಲಿ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಕೆಲವು ವ್ಯಾಪಾರ ಗುಂಪುಗಳಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಸುಮಾರು 56 ಕೋಟಿ ಕ್ಯಾಶ್, 32 ಕೆಜಿ ಚಿನ್ನ, 16 ಕೋಟಿ ಮೌಲ್ಯದ ವಜ್ರ ಸೇರಿ  390 ಕೋಟಿ ರೂಗಳಷ್ಟು “ಬೇನಾಮಿ” ಆಸ್ತಿ ಅಥವಾ “ಲೆಕ್ಕ ರಹಿತ” ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಿಕೊಂಡ ಸ್ವತ್ತುಗಳಲ್ಲಿ 56 ಕೋಟಿ ರೂ ನಗದು ಮತ್ತು 14 ಕೋಟಿ ರೂ ಮೌಲ್ಯದ 32 ಕೆಜಿ ಚಿನ್ನ, ಮುತ್ತುಗಳು ಮತ್ತು ವಜ್ರಗಳು ಸೇರಿವೆ. ದಾಳಿಯ ವೇಳೆ ಅಧಿಕಾರಿಗಳು ಕೆಲವು ಆಸ್ತಿ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಉಕ್ಕು, ಬಟ್ಟೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಎರಡು ವ್ಯಾಪಾರ ಗುಂಪುಗಳಿಗೆ ಸಂಬಂಧಿಸಿದ ವಸತಿ ಮತ್ತು ಅಧಿಕೃತ ಆವರಣದಲ್ಲಿ ಆಗಸ್ಟ್ 1 ಮತ್ತು 8 ರ ನಡುವೆ ದಾಳಿಗಳನ್ನು ನಡೆಸಲಾಗಿತ್ತು. ಇದೀಗ ಈ ದಾಳಿಯಲ್ಲಿ ವಶಕ್ಕೆ ಪಡೆಯಲಾದ ಸ್ವತ್ತುಗಳ ದತ್ತಾಂಶವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ದಾಳಿಯ ವೇಳೆ ವಶಪಡಿಸಿಕೊಂಡ ನಗದನ್ನು ನಿಖರವಾಗಿ ಲೆಕ್ಕ ಹಾಕಲು ಅಧಿಕಾರಿಗಳಿಗೆ ಸುಮಾರು 13 ಗಂಟೆಗಳು ಬೇಕಾಯಿತು ಎನ್ನಲಾಗಿದೆ.

ಈ ವ್ಯಾಪಾರ ಗುಂಪುಗಳಿಂದ ಆಪಾದಿತ ತೆರಿಗೆ ವಂಚನೆಯ ಬಗ್ಗೆ ಮಾಹಿತಿ ಪಡೆದ ನಂತರ, ಆದಾಯ ತೆರಿಗೆ ಇಲಾಖೆಯು ಶೋಧ ಕಾರ್ಯಾಚರಣೆಗಾಗಿ ರಾಜ್ಯದಾದ್ಯಂತ 260 ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಿತ್ತು. ಕಾರ್ಯಾಚರಣೆಯಲ್ಲಿ 120 ಕ್ಕೂ ಹೆಚ್ಚು ವಾಹನಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *