ಮುಂಬೈ: ಮಹಾರಾಷ್ಟ್ರ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂದೆ ಹಾಗೂ ಉಳಿದ ಇತರ ಬಂಡಾಯ ಶಾಸಕರು ಬುಧವಾರ ರಾತ್ರಿ ಪಣಜಿಯ ತಾಜ್ ಹೋಟೆಲ್‌ನಲ್ಲಿ ತಂಗಿದ್ದು, ಇಂದು ಮುಂಬೈಗೆ ಮರಳಲಿದ್ದಾರೆಂದು ಹೇಳಲಾಗುತ್ತಿದೆ. ಗುರುವಾರದಂದು ಸುಪ್ರಿಂಕೋರ್ಟ್ ವಿಶ್ವಾಸಮತಯಾಚನೆಗೆ ಸೂಚಿಸಿರುವ ಕಾರಣ, ಬಂಡಾಯ ಶಾಸಕರು ಇಂದು ಬೆಳಗ್ಗೆ ಮುಂಬೈಗೆ ತೆರಳುವ ನಿರೀಕ್ಷೆಯಿದೆ.
ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರಕ್ಕೆ ಗುರುವಾರ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಮಹಾರಾಷ್ಟ್ರ ರಾಜ್ಯಪಾಲರು ನೀಡಿದ ನಿರ್ದೇಶನವನ್ನು ಪ್ರಶ್ನಿಸಿ ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ಅವರು ಸಲ್ಲಿಸಿದ ಮನವಿಯನ್ನ ನಿನ್ನೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತ್ತು. ವಿಶ್ವಾಸಮತ ಯಾಚಿಸುವಂತೆ ಸೂಚನೆ ನೀಡಿರುವ ಮಹಾರಾಷ್ಟ್ರ ರಾಜ್ಯಪಾಲರ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಸುಪ್ರೀಂಕೋರ್ಟ್ ಆದೇಶ ನೀಡಿದ ಕೆಲವೇ ಕ್ಷಣಗಳಲ್ಲಿ ಫೇಸ್‌ಬುಕ್ ಲೈವ್ ಬಂದ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮತ್ತು ವಿಧಾನ ಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಇದರಂತೆ ರಾತ್ರಿ ರಾಜಭವನಕ್ಕೆ ತೆರಳಿದ ಉದ್ಧವ್ ಠಾಕ್ರೆ ಅವರು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಕೊನೆಗೂ ಮೈತ್ರಿ ಸರ್ಕಾರ ಕೆಡವಿದ ಬಂಡಾಯ ಶಾಸಕರು: ಶಿಂಧೆ ಪಾಳಯದಲ್ಲಿರುವ 50 ಬಂಡಾಯ ಶಾಸಕರಲ್ಲಿ 40 ಶಾಸಕರು ಶಿವಸೇನೆ ಶಾಸಕರಾಗಿದ್ದಾರೆ. ಬೆಂಬಲ ವಾಪಸ್ ಪಡೆಯುವ ಮೂಲಕ ಮಹಾರಾಷ್ಟ್ರದಲ್ಲಿ ಮಹಾ ಅಘಾಡಿ ವಿಕಾಸ ಸರ್ಕಾರ ಪತನವಾಗಿದೆ. ಸೈದ್ಧಾಂತಿಕವಾಗಿ ಹೊಂದಿಕೆಯಾಗದ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗಿನ ಅಸಹಜ ಮೈತ್ರಿಯನ್ನು ಕೈಬಿಡಲು ಮತ್ತು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಲು ಬಯಸುತ್ತಾರೆ ಎಂದು ಬಣ ವಾದಿಸಿದೆ.
ಕಾಂಗ್ರೆಸ್ ಮತ್ತು ಎನ್‌ಸಿಪಿಯಿಂದಾಗಿ ಅನೇಕ ಶಾಸಕರು, ಸಂಸದರು ಕೋಪಗೊಂಡಿದ್ದಾರೆ’ ಎಂದು ಕೇಸರ್ಕರ್ ಹೇಳಿದ್ದಾರೆ. ಎನ್‌ಸಿಪಿಯ ರಾಜ್ಯಾಧ್ಯಕ್ಷರು ನಮ್ಮ ಕ್ಷೇತ್ರಕ್ಕೆ ಹೋಗಿ ಅವರವರ ಹೆಸರುಗಳನ್ನು ಘೋಷಿಸುತ್ತಿದ್ದರು. ನಮ್ಮಿಂದಲೇ ಎನ್‌ಸಿಪಿ ಮತ್ತು ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರು. ಆದರೆ ನಮ್ಮ ಸರ್ಕಾರದಲ್ಲಿ ನಮಗೆ ಪ್ರಾತಿನಿಧ್ಯ ದೊರೆಯುತ್ತಿರಲಿಲ್ಲ. ಠಾಕ್ರೆ ನಮ್ಮ ಮಾತಿಗೆ ಬೆಲೆ ನೀಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.
ಪ್ರತಿದಿನ ಸಂಜಯ್ ರಾವತ್ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದರು. ಇದರಿಂದ ಜನ ಅಸಮಾಧಾನಗೊಂಡಿದ್ದರು. ರಾವತ್‌ನಂತಹ ವಕ್ತಾರರು ಯಾವುದೇ ಪಕ್ಷಕ್ಕೆ ಬರಬಾರದು ಎಂದು ನಾವು ಬಯಸುತ್ತೇವೆ ಎಂದು ಕೇಸರ್ಕರ್ ಹೇಳಿದರು.
ಇದನ್ನೂ ಓದಿ : ಮುಖ್ಯಮಂತ್ರಿ ಸ್ಥಾನಕ್ಕೆ ಉದ್ದವ್ ಠಾಕ್ರೆ ರಾಜೀನಾಮೆ
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ : ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಮತ್ತು ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ ಅವರು ಸರ್ಕಾರ ರಚನೆ ಕುರಿತು ಮುಂದಿನ ಕಾರ್ಯತಂತ್ರದ ಬಗ್ಗೆ ನಿರ್ಧರಿಸುತ್ತಾರೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
ಫಡಣವೀಸ್ ಮುಖ್ಯಮಂತ್ರಿ, ಸದ್ಯಕ್ಕೆ ಮಂತ್ರಿಯಾಗಿರುವ ಶಿಂಧೆ ಅವರು ಉಪ ಮುಖ್ಯಮಂತ್ರಿಯಾಗುವ ನಿರೀಕ್ಷೆಯಿದೆ. ವಾರಾಂತ್ಯದಲ್ಲಿ ಫಡಣವೀಸ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.