ಶಿಂಧೆ ಬಣದ 22ಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ..?

ಮುಂಬೈ : ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣದ 22 ಶಾಸಕರು ಬಿಜೆಪಿಗೆ ಶೀಘ್ರ ಸೇರ್ಪಡೆಯಾಗಲಿದ್ದಾರೆ. ಹಾಗೂ ಶಿಂಧೆಯ ಬದಲಿಗೆ ಬಿಜೆಪಿ ನಾಯಕ ನೂತನ ಸಿಎಂ ಆಗಲಿದ್ದಾರೆ ಎಂದು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾದ ಮುಖವಾಣಿ ಸಾಮ್ನಾ ಆರೋಪಿಸಿದೆ.

ಸಾಮ್ನಾದಲ್ಲಿ ಭಾನುವಾರದ ಸಂಚಿಕೆಯಲ್ಲಿ, ಶಿಂಧೆ-ಬಿಜೆಪಿ ಸರ್ಕಾರ ತಾತ್ಕಾಲಿಕ ವ್ಯವಸ್ಥೆ. ಯಾವುದೇ ಸಂದರ್ಭದಲ್ಲಿ ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುವಂತೆ ಏಕನಾಥ್‌ ಶಿಂಧೆಗೆ ಸೂಚಿಸುವ ಸಾಧ್ಯತೆ ಇದೆ. ಹಾಗೂ ಬಿಜೆಪಿಯ ಹೊಸ ಸಿಎಂ ಆಯ್ಕೆಯಾಗಲಿದ್ದಾರೆ ಎಂದು ಸಾಮ್ನಾದ ಲೇಖನ ತಿಳಿಸಿದೆ. ಏಕನಾಥ್‌ ಶಿಂಧೆ ಅವರು ಕೇಂದ್ರ ಸಚಿವ ಮತ್ತು ಆರ್‌ಪಿಐ ನಾಯಕ ರಾಮ್‌ದಾಸ್‌ ಅಟಾವಳೆ ಮಾದರಿಯಲ್ಲಿ ಕೇಂದ್ರ ಸಚಿವರಾಗಲಿದ್ದಾರೆ. ಮತ್ತೊಬ್ಬ ನಾರಾಯಣ ರಾಣೆ ರೀತಿ ಶಿಂಧೆ ಅನಿವಾರ್ಯವಾಗಿ ಉಳಿದುಕೊಳ್ಳಬೇಕಾಗುತ್ತದೆ ಎಂದು ಟೀಕಿಸಲಾಗಿದೆ.

ನಾಲ್ಕೈದು ತಿಂಗಳ ಬಳಿಕ ಸಾಮ್ನಾದಲ್ಲಿ ಮತ್ತೆ ರಾಜಕೀಯ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಏಕನಾಥ್ ಶಿಂಧೆ ಬಣದಲ್ಲಿದ್ದ 40 ಶಾಸಕರ ಪೈಕಿ 22 ಮಂದಿ ಅಸಮಾಧಾನಗೊಂಡಿದ್ದಾರೆ. ಶೀಘ್ರದಲ್ಲೇ ಅವರು ಬಿಜೆಪಿ ಸೇರಲಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಎಂಬುದು ತಾತ್ಕಾಲಿಕ ವ್ಯವಸ್ಥೆಯಾಗಿದೆ. ಈಗ ಎಲ್ಲರಿಗೂ ಅರ್ಥವಾಗುತ್ತಿದ್ದು, ಮುಖ್ಯಮಂತ್ರಿ ಸಮವಸ್ತ್ರ ಯಾವಾಗ ಬೇಕಾದರೂ ತೆಗೆದಿಡಬಹುದಾಗಿದೆ ಎಂದು ಬರೆಯಲಾಗಿದೆ.

ಇತ್ತೀಚೆಗೆ ಅಂಧೇರಿಯ ಪೂರ್ವ ಉಪಚುನಾವಣೆಯಲ್ಲಿ ಶಿಂಧೆ ಬಣ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಿತ್ತು. ಆದರೆ ಬಿಜೆಪಿ ಅದನ್ನು ತಡೆದಿದೆ. ಶಿಂಧೆ ಬಣ ಇತ್ತೀಚೆಗೆ ನಡೆದ ಗ್ರಾಮಪಂಚಾಯ್ತಿ ಮತ್ತು ಸರಪಂಚ್ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದಿರುವುದಾಗಿ ಹೇಳಿಕೊಂಡಿತ್ತು. ಆದರೆ ಇದು ಸುಳ್ಳು ಮಾಹಿತಿ ಎಂದು ಅರ್ಥ ಮಾಡಿಕೊಂಡ ಶಾಸಕರು ಅಸಮಾಧಾನಗೊಂಡಿದ್ದಾರೆ. ಶೀಘ್ರವೇ ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದಾರೆ.

ಏಕನಾಥ್ ಶಿಂಧೆ ಮಹಾರಾಷ್ಟ್ರದ ಭಾರೀ ನಷ್ಟಕ್ಕೆ ಕಾರಣವಾಗಲಿದ್ದು, ರಾಜ್ಯದ ಜನ ಅವನನ್ನು ಕ್ಷಮಿಸುವುದಿಲ್ಲ. ಬಿಜೆಪಿಯವರು ತಮ್ಮ ಲಾಭಕ್ಕಾಗಿ ಶಿಂಧೆಯನ್ನು ಬಳಸಿಕೊಳ್ಳುವುದನ್ನು ಮುಂದುವರೆಸಲಿದ್ದಾರೆ.

ಮುಖ್ಯಮಂತ್ರಿ ಕಚೇರಿ ಮೇಲೆ ಶಿಂಧೆ ಅವರಿಗೆ ಯಾವುದೇ ನಿಯಂತ್ರಣವಿಲ್ಲ. ಎಲ್ಲ ನಿರ್ಣಯಗಳನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *