ನಮ್ಮ ಇಂದಿನ ಭಾರತದಲ್ಲಿ ಮತಕಳ್ಳತನ ಈಗ ಬಹು ಪ್ರಚಲಿತ ವಿಷಯವಾಗಿ ಹೊರಹೊಮ್ಮಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜಿನಾಮೆಗೆ ಮತ್ತು ಇಡೀ ಆಯೋಗದ ಪುನರ್ರಚನೆಗೆ ಹೋರಾಟಗಳು ನಡೆಯುತ್ತಿರುವಾಗಲೇ, ಮಹಾರಾಷ್ಟ್ರದ ಕೊಲ್ಹಾಪುರದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗಳಲ್ಲಿ ನಡೆದ ಅಕ್ರಮಗಳ ದೊಡ್ಡ ಸುದ್ದಿ ಹೊರಬಂದಿದೆ. ಈ ಸಂಘದ ವಾರ್ಷಿಕ ವಹಿವಾಟು ನಾಲ್ಕು ಸಾವಿರ (4000 ಕೋಟಿ) ಕೋಟಿ ರೂಪಾಯಿಗಳು! ಸಹಕಾರ ಕ್ಷೇತ್ರದ ಮೇಲೆ ದೊಡ್ಡ ಕಣ್ಣಿಟ್ಟಿರುವ ಬಿಜೆಪಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿ ಜನರಿಗೆ ಒಳ್ಳೆಯದು ಮಾಡಿ ಅಧಿಕಾರಕ್ಕೆ ಬರುವ ಬದಲು ಅಡ್ಡದಾರಿಯ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವ ಹುನ್ನಾರ ಮಾಡಿ ಕುಳಿತಿದೆ. ಅದರ ಈ ದುಸ್ಸಾಹಸ ನೋಡಿದರೆ ಅದು ಎಂತಹ ಸ್ಥಿತಿಗೆ ಇಳಿದಿದೆ ಎಂಬುದು ಗೊತ್ತಾಗುತ್ತದೆ.
ಗೊಕುಲ್ ಡೈರಿಯಲ್ಲಿ ನಡೆದದ್ದೇನು?
ಕಳೆದ ಅಕ್ಟೋಬರಿನಲ್ಲಿ (19 ನೇ ತಾರೀಖು) ಗೋಕುಲ್ ಡೈರಿ ಸಹಕಾರ ಮಂಡಳಿಯ ಬೋರ್ಡಿಗೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಸತೇಜ್ ಪಾಟೀಲ್ ಅವರ ನೇತ್ರತ್ವದ ಕಾಂಗ್ರೆಸ್ ಬೆಂಬಲಿತ ರಾಜರ್ಷಿ ಶಾಹು ಶೇತ್ಕಾರಿ ಸಂವಿಚಾರಿ ಅಘಾಡಿಯ ಹದಿಮೂರು ಅಭ್ಯರ್ಥಿಗಳು ಗೆದ್ದರು (ಒಟ್ಟು ಸದಸ್ಯ ಬಲ 25, ಬಲಾಬಲ:13-12). ಒಟ್ಟು 25 ಸ್ಥಾನಗಳ ಮಂಡಳಿಯಲ್ಲಿ ಇದು ಬಹುಮತದ ಗೆಲುವು. ಅಕ್ಟೋಬರ್ 29 ರಂದು ಅದ್ಯಕ್ಷರ ಚುನಾವಣೆಗೆ ನಡೆದ ಸಭೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರುಗಳು ಭಾಗವಹಿಸಲಿಲ್ಲ. ಕಾಂಗ್ರೆಸ್ ಬೆಂಬಲಿಗ ಸದಸ್ಯರು ಶಶಿಕಾಂತ ಪಾಟೀಲ್ ಚೂಯೆ ಅವರು ಅದ್ಯಕ್ಷರಾಗಿ ಚುನಾಯಿತರಾಗಿದ್ದಾರೆಂದು ಘೋಷಿಸಿದರು. ಆದರೆ ಆಢಳಿತ ಇದನ್ನು ಒಪ್ಪಿಕೊಳ್ಳಲಿಲ್ಲ. ಸಭೆ ನಡೆಸಲು ಬೇಕಾದ ಕೋರಂ ಇರಲಿಲ್ಲ ಎಂಬ ನಿಲುವನ್ನು ಆಢಳಿತ ತೆಗೆದುಕೊಂಡಿತು.
ಇದನ್ನೂ ಓದಿ : ಸಂವಿಧಾನವನ್ನು ಜಾರಿಗೆ ತರುವಲ್ಲಿ ಶಾಸಕಾಂಗ, ಕಾರ್ಯಾಂಗ ಎಡವಿವೆ: ಹಿರಿಯ ವಕೀಲ ರಂಜನ್ ರಾವ್
ಸುಗ್ರಿವಾಜ್ಞೆಯ ಹಿಂಬಾಗಿಲ ದಾರಿ
ನವೆಂಬರ್ ನಾಲ್ಕರಂದು ರಾಜ್ಯಪಾಲರ ಸುಗ್ರಿವಾಜ್ಞೆಯ ತಯಾರಿ ನಡೆಯಿತು. ಕಾರ್ಯಾಂಗ ತನ್ನ ಆಜ್ಞೆಯ ಮೂಲಕ ಮಂಡಳಿಗೆ ಐದು ಸದಸ್ಯರ ನೇಮಕ ಮಾಡಿತು. ನವೆಂಬರ್ ಆರರಂದು ರಾಜ್ಯಪಾಲರು ಈ ಸುಗ್ರಿವಾಜ್ಞೆಯನ್ನು ಹೊರಡಿಸಿದರು. ಇದರಲ್ಲಿ ನಾಲ್ಕು ಸದಸ್ಯರಿಗೆ ಮತ ಹಕ್ಕು ಬಂತು. ಈಗ ಮಂಡಳಿಯಲ್ಲಿನ ಬಲಾಬಲ 16:13 ಆಯಿತು. ನವೆಂಬರ್ 10 ರಂದು ನಡೆದ ಸಭೆಯಲ್ಲಿ ಆಢಳಿತ ಬಿಜೆಪಿಯ ಕೈಗೆ ಹೋಯಿತು. ಸೋತವರು ಮುಂಬೈ ಉಚ್ಛ ನ್ಯಾಯಾಲಯಕ್ಕೆ ಹೋದರು. ಆದರೆ ಮುಂಬೈ ಉಚ್ಛ ನ್ಯಾಯಾಲಯ ಪರಿಹಾರ ನೀಡಲಿಲ್ಲ. ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳು ತಳೆವ ನಿಲುವುಗಳು ಕಳವಳಕಾರಿಯಾಗಿವೆ ಎಂದೂ ಹೇಳಲಾಗುತ್ತಿದೆ. ನ್ಯಾಯಾಲಯಗಳಲ್ಲಿ ಸಮಯ ಮತ್ತು ಸಂದರ್ಭಗಳ ಪೂರ್ಣ ವಿಶ್ಲೇಷಣೆ ಇಲ್ಲದೆ ಹೀಗಾಗುತ್ತಿದೆಯೇ ಎಂಬ ಪ್ರಶ್ನೆ ಜೊತೆಗೆ ನ್ಯಾಲಯಗಳು ಕೇಸರೀಕರಣದ ಬಲೆಗಳಿಗೆ ಬಿದ್ದಿವೆಯೆ ಎಂಬ ಪ್ರಶ್ನೆಗಳೂ ಬರುತ್ತಿವೆ. ಒಟ್ಟಾರೆಯಾಗಿ, ದೇಶದಲ್ಲಿನ ಸಂಸ್ಥೆಗಳಲ್ಲಿನ ಪ್ರಜಾಪ್ರಭುತ್ವವನ್ನು ಯಾವ ಮಟ್ಟಕ್ಕೆ ಇಳಿಸಲಾಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ.
ಇದನ್ನೂ ನೋಡಿ : ದತ್ತು/ಮೆಂಟರ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮಾರಾಟ ಮಾಡಲು ಮುಂದಾದ ಡಿ.ಕೆ.ಶಿವಕುಮಾರ್ ಸರ್ಕಾರ..Janashakthi Media
