ತರಕಾರಿ ಮಾರುವವರ ತಲೆಯ ಮೇಲೆ ಕ್ಯಾಮೆರಾ! ಬೆಂಗಳೂರಿನ ಕೆಆರ್ ಮಾರ್ಕೆಟ್‌ನಲ್ಲಿ ಇದೆಂಥಾ ಟೆಕ್ ಪ್ರಯೋಗ? | Bengaluru KR Market

Please follow and like us:

Bengaluru KR Market: ಬೆಂಗಳೂರಿನ ಪ್ರಸಿದ್ಧ ಕೆಆರ್ ಮಾರ್ಕೆಟ್‌ನಲ್ಲಿ ಈಗ ಹೊಸದೊಂದು ತಂತ್ರಜ್ಞಾನ ಪ್ರಯೋಗದ ಚರ್ಚೆ ಶುರುವಾಗಿದೆ. ಪ್ರತಿನಿತ್ಯ ಹೂವು, ತರಕಾರಿ ಮಾರಾಟದಲ್ಲಿ ಬ್ಯುಸಿಯಾಗಿರುವ ವ್ಯಾಪಾರಿಗಳು ತಲೆಯ ಮೇಲೆ ಕ್ಯಾಮೆರಾ ಧರಿಸಿಕೊಂಡು ವ್ಯಾಪಾರ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ದೃಶ್ಯ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ಇದರ ಹಿಂದಿನ ಉದ್ದೇಶವೇನು ಎಂಬ ಕುತೂಹಲ ಮೂಡಿದೆ.

ಇನ್‌ಸ್ಟಾಗ್ರಾಂ ಪೇಜ್‌ ಆದ ‘ಕ್ಯಾಂಡಿಡ್ ಬೆಂಗಳೂರು‘ ಈ ಫೋಟೋಗಳನ್ನು ಹಂಚಿಕೊಂಡಿದೆ. ತಲೆಗೆ ಅಳವಡಿಸಿರುವ ಕ್ಯಾಮೆರಾಗಳು ವ್ಯಾಪಾರಿಗಳ ದಿನನಿತ್ಯದ ಚಲನವಲನ, ಹೂವು ಮತ್ತು ತರಕಾರಿಗಳನ್ನು ನಿರ್ವಹಿಸುವ ರೀತಿ ಹಾಗೂ ಗ್ರಾಹಕರೊಂದಿಗೆ ನಡೆಸುವ ಸಂವಹನವನ್ನು ರೆಕಾರ್ಡ್ ಮಾಡುತ್ತಿವೆ ಎಂದು ವರದಿಯಾಗಿದೆ. ಈ ದೃಶ್ಯಗಳು ಎಐ ತಂತ್ರಜ್ಞಾನ ಮತ್ತು ಹ್ಯೂಮನಾಯ್ಡ್ ರೋಬೋಟ್‌ಗಳ ಭವಿಷ್ಯದ ಕುರಿತು ಚರ್ಚೆಗೆ ಕಾರಣವಾಗಿವೆ.

ಪ್ರಯೋಗದ ಉದ್ದೇಶವೇನು?

ಈ ಕ್ಯಾಮೆರಾಗಳು ಮಾನವರ ಚಲನವಲನ ಮತ್ತು ಕೆಲಸ ಮಾಡುವ ವಿಧಾನಗಳನ್ನು ದಾಖಲಿಸುವ ಮೂಲಕ ಎಐ(AI) ರೋಬೋಟ್‌ಗಳಿಗೆ ತರಬೇತಿ ನೀಡುವ ಪ್ರಯೋಗದ ಭಾಗವಾಗಿರಬಹುದು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಪ್ರಯೋಗದ ನಿಖರ ಉದ್ದೇಶದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

https://www.instagram.com/p/DfriohGDDo7/?utm_source=ig_web_button_share_sheet

ನೆಟ್ಟಿಗರಿಂದ ತರಹೇವಾರಿ ಪ್ರತಿಕ್ರಿಯೆ

ಈ ಫೋಟೋಗಳಿಗೆ ನೆಟ್ಟಿಗರಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮುಂದೊಂದು ದಿನ ರೋಬೋಟ್‌ಗಳೇ ತರಕಾರಿ ಮಾರಾಟ ಮಾಡುತ್ತವೆಯೇ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು, ಇಂತಹ ಸಾಧನಗಳು ಮಾನವರ ಕೈಚಳಕ, ಸಣ್ಣ ಸಣ್ಣ ಚಲನೆಗಳು ಮತ್ತು ಕೆಲಸದ ವಿಧಾನಗಳನ್ನು ದಾಖಲಿಸಿ ಹ್ಯೂಮನಾಯ್ಡ್ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಲು ನೆರವಾಗಬಹುದು ಎಂದು ವಿವರಿಸಿದ್ದಾರೆ.

ಇದನ್ನೂ ನೋಡಿ: ದತ್ತು/ಮೆಂಟರ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮಾರಾಟ ಮಾಡಲು ಮುಂದಾದ ಡಿ.ಕೆ.ಶಿವಕುಮಾರ್ ಸರ್ಕಾರ..Janashakthi Media

ಮಾನವ ಉದ್ಯೋಗಗಳಿಗೆ ಕುತ್ತು ತರುವ ಬೀತಿ

ಇನ್ನೊಂದೆಡೆ, ಕಾರ್ಮಿಕರ ಚಲನವಲನದ ಮಾಹಿತಿಯನ್ನು ಕಡಿಮೆ ಹಣ ನೀಡಿ ಸಂಗ್ರಹಿಸಿ, ಭವಿಷ್ಯದಲ್ಲಿ ಅದೇ ತಂತ್ರಜ್ಞಾನದಿಂದ ಮಾನವ ಉದ್ಯೋಗಗಳಿಗೆ ಕುತ್ತು ತರಬಹುದೇ ಎಂಬ ಆತಂಕವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸಲು ಕೂಗುವ ‘ಆಲುಗಡ್ಡೆ ತಗೊಳ್ಳಿ, ಇರುಳ್ಳಿ ತಗೊಳ್ಳಿ‘ ಎಂಬ ಮಾತುಗಳನ್ನೇ ಕ್ಯಾಮೆರಾ ರೆಕಾರ್ಡ್ ಮಾಡುತ್ತಿರಬಹುದು ಎಂದು ಹಾಸ್ಯ ಮಾಡಿದ್ದಾರೆ.

ಇದನ್ನೂ ಓದಿ: ನವೆಂಬರ್ 26ರಂದು ದೇಶವ್ಯಾಪಿ ರೈತರ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ

ಒಟ್ಟಿನಲ್ಲಿ, ಕೆಆರ್ ಮಾರ್ಕೆಟ್‌ನ ವ್ಯಾಪಾರಿಗಳ ತಲೆಯ ಮೇಲಿನ ಈ ಕ್ಯಾಮೆರಾಗಳು ಎಐ, ರೋಬೋಟಿಕ್ಸ್ ಮತ್ತು ಮಾನವ ಶ್ರಮದ ಭವಿಷ್ಯದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.

Please follow and like us:
Donate Janashakthi Media

Leave a Reply

Your email address will not be published. Required fields are marked *