ಸಾಂಗ್ಲಿ: ಸೆಕೆಂಡ್‌ಗಳ ಕಾಲವೂ ಸ್ಮಾರ್ಟ್‌ಫೋನ್ ಬಿಟ್ಟಿರಲಾಗದಷ್ಟು ಇಂಟರ್ನೆಟ್ ಯುಗ ಮನುಷ್ಯರ ಜೀವನವನ್ನು ಆವರಿಸಿಕೊಂಡಿದೆ. ಮಕ್ಕಳಿಗೆ ಮೊಬೈಲ್ ಇಲ್ಲದೆ ಊಟ ಮಾಡಿಸುವುದೇ ಕಷ್ಟ ಆಗ್ಬೇಟ್ಟಿದೆ. ಹೀಗಿರುವಾಗ ಈ ಹಳ್ಳಿಯೊಂದರಲ್ಲಿ ಪ್ರತಿದಿನ ಸಂಜೆ 1.30 ಗಂಟೆ ಗಂಟೆ ಮೊಬೈಲ್ ಸ್ವಿಚ್ ಆಫ್ ಆಗುತ್ತದೆ!
ಅಚ್ಚರಿ ಎನಿಸಿದರೂ ಸತ್ಯ., ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ, ವಡ್ಗಾನ್ ಎಂಬ ಹಳ್ಳಿಯಲ್ಲಿ ರಾತ್ರಿ 7 ಗಂಟೆಯಿಂದ 8.30ರವರೆಗೆ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟ್ಯಾಬ್ ಎಲ್ಲವೂ ಬಂದ್ ಆಗುತ್ತದೆ. ಅಷ್ಟಕ್ಕೂ ಆಡಳಿತ ವ್ಯವಸ್ಥೆಯಾಗಲೀ ಅಥವಾ ಇತರ ಮೂಲಗಳಿಂದಾಗಲೀ ಬಂದ್ ಆಗುವುದಲ್ಲ. ಸ್ವತಃ ಪ್ರತಿಯೊಬ್ಬರೂ ಕಡ್ಡಾಯವಾಗಿ ಮೊಬೈಲ್ ಸ್ವಿಚ್ ಆಫ್ ಮಾಡಬೇಕು. ಅಲ್ಲದೆ ಇಂಟರ್ನೆಟ್‌ನ್ನು ಈ ಒಂದೂವರೆ ಗಂಟೆಯ ಅವಧಿಯಲ್ಲಿ ಬಳಸುವಂತೆಯೇ ಇಲ್ಲ.
ಅಷ್ಟಕ್ಕೂ ಪ್ರತಿದಿನ ಕಡ್ಡಾಯವಾಗಿ ಒಂದೂವರೆ ಗಂಟೆ ಇಂಟರ್ನೆಟ್ ಬಳಕೆ ಬಂದ್ ಮಾಡಲು ಕಾರಣ ಅಲ್ಲಿನ ಮಕ್ಕಳು ಮೊಬೈಲ್ ಬಳಕೆಗೆ ಅಂಟಿಕೊಂಡಿರುವುದು. ಮಕ್ಕಳ ಅತಿಯಾದ ಮೊಬೈಲ್ ಬಳಕೆಯು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಮೊಬೈಲ್ ಬಳಕೆಯಿಂದಾಗಿ ಕಲಿಕೆಯಲ್ಲೂ ಕಳಪೆ ಸಾಧನೆ ತೋರಿಸಿದ ಮಕ್ಕಳನ್ನು ಸರಿ ದಾರಿಗೆ ತರುವುದಕ್ಕೆ ಶಿಕ್ಷಕರು ಹೈರಾಣಾಗಿದ್ದರು. ಕೊನೆಗೆ ಗ್ರಾಮದ ಮುಖ್ಯಸ್ಥನಲ್ಲಿ ವಿಷಯ ಪ್ರಸ್ತಾಪಿಸಿದಾಗ ಆತ ಕಂಡುಕೊಂಡ ದಾರಿ ಇದು. ದಿನಕ್ಕೆ ಒಂದೂವರೆ ಗಂಟೆ ಇಂಟರ್ನೆಟ್ ಬಂದ್ ಮಾಡುವುದು.
ರಾತ್ರಿ 7 ಗಂಟೆಗೆ ಸರಿಯಾಗಿ ಸೈರನ್ ಮೊಳಗುತ್ತದೆ. ಸೈರನ್ ಮೊಳಗಿದಂತೆ ಎಲ್ಲಾ ಮನೆಗಳಲ್ಲಿಯೂ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಇಂಟರ್ನೆಟ್ ಬಳಕೆ ಮಾಡುವ ಸಾಧನಗಳನ್ನು ಕಡ್ಡಾಯವಾಗಿ ಸ್ವಿಚ್ ಆಫ್ ಮಾಡಬೇಕು. ಈ ಅವಧಿಯನ್ನು ಪರಸ್ಪರ ಮಾತುಕತೆ ನಡೆಸುವುದು, ಮಕ್ಕಳು ಓದಲು ವಿನಿಯೋಗಿಸುವುದು ನಡೆಯುತ್ತದೆ. ವಿಶೇಷವೆಂದರೆ ಈ ನಿಯಮ ಹೇರಿದ ನಂತರ ಅಲ್ಲಿ ಸಂಬಂಧಗಳೂ ಸುಧಾರಿಸಿವೆ, ಮಕ್ಕಳು ಓದಿನಲ್ಲೂ ಗಮನಾರ್ಹ ಬೆಳವಣಿಗೆ ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ.