ಲಖಿಂಪುರ ಹಿಂಸಾಚಾರ ಖಂಡಿಸಿ ಮಹಾರಾಷ್ಟ್ರ ಬಂದ್: ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧ

ಮುಂಬೈ: ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಾಲ್ಕು ಮಂದಿ ರೈತರನ್ನು ಹತ್ಯೆ ಮಾಡಲಾಗಿತ್ತು. ಇದನ್ನು ಖಂಡಿಸಿ  ಮಹಾರಾಷ್ಟ್ರದ  ಮಹಾ ವಿಕಾಸ ಅಘಾಡಿಯ (ಎಂವಿಎ) ಪಾಲುದಾರ ಮೂರು ಪಕ್ಷಗಳು ರಾಜ್ಯ ಬಂದ್‌ಗೆ ಕರೆ ನೀಡಿದ್ದವು.

ಮಹಾರಾಷ್ಟ್ರದಲ್ಲಿ ಬಂದ್‌ ನಿಂದಾಗಿ ಮುಂಬೈ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಬಸ್‌ ಸಂಚಾರ ವ್ಯತ್ಯಯದಿಂದಾಗಿ ಸಾರ್ವಜನಿಕರ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿವೆ. ಬಂದ್‌ನ ಬಿಸಿ ಮುಂಬೈ ಸೇರಿದಂತೆ ಇತರ ಪ್ರದೇಶಗಳಿಗೂ ತಟ್ಟಿತು.

ರೈತರ ಪ್ರತಿಭಟನೆ ಬೆಂಬಲಿಸಿ ನಡೆದ ಬಂದ್‌ಗೆ ಮಹಾರಾಷ್ಟ್ರ ವಿಕಾಸ್ ಅಘಾಡಿ ನೇತೃತ್ವದ ಸರ್ಕಾರದ ಮೈತ್ರಿಕೂಟ ಪಕ್ಷಗಳಾದ ಶಿವಸೇನಾ, ಕಾಂಗ್ರೆಸ್ ಮತ್ತು ಎನ್ ಸಿಪಿ ಬೆಂಬಲ ವ್ಯಕ್ತಪಡಿಸಿದೆ. ಅಲ್ಲದೇ ಮೂರು ಪಕ್ಷಗಳು ಪತ್ರಿಕಾಗೋಷ್ಠಿಯಲ್ಲಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದವು.

ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋಗಳನ್ನು ಶಿವಸೇನಾ ಕಾರ್ಯಕರ್ತರು ತಡೆದು ನಿಲ್ಲಿಸಿ ಬಂದ್ ಗೆ ಬೆಂಬಲ ನೀಡುವಂತೆ ಸೂಚಿಸುತ್ತಿರುವುದಾಗಿ ಅಲ್ಲಲ್ಲಿ ಕೇಳಿ ಬರುತ್ತಿವೆ. ಕೆಲವೆಡೆ ಕಲ್ಲು ತೂರಾಟದಂತಹ ಘಟನೆ ನಡೆದಿದ್ದು, 9 ಬಸ್ ಗಳು ಜಖಂಗೊಂಡಿರುವುದಾಗಿ ವರದಿಯಾಗಿದೆ.

ಭಾನುವಾರ ಮಧ್ಯರಾತ್ರಿಯಿಂದ ಆರಂಭಗೊಂಡಿರುವ ಬಂದ್‌ಗೆ ಮಹಾರಾಷ್ಟ್ರ ಜನತೆ ಸ್ಪಂದಿಸಿದ್ದು, ಸಂಚಾರಿ ವ್ಯವಸ್ಥೆ ಸ್ತಬ್ದಗೊಂಡಿದ್ದಲ್ಲದೆ, ಬಹುತೇಕ ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳು ಮುಚ್ಚಲ್ಪಟ್ಟಿವೆ. ಮುಂಬೈ ನಗರ ಪಾಲಿಕೆಯ ಬಸ್‌ಗಳು ಮತ್ತು ಕಪ್ಪು–ಹಳದಿ ಬಣ್ಣದ ಕ್ಯಾಬ್‌ಗಳು ರಸ್ತೆಗಳಿಂದ ದೂರವೇ ಉಳಿದಿದ್ದವು. ಇದರಿಂದ ಸ್ಥಳೀಯ ರೈಲು ನಿಲ್ದಾಣಗಳಲ್ಲಿ ಭಾರಿ ಜನಸಂದಣಿ ಇತ್ತು. ರೈಲುಗಳ ಸೇವೆ ಯಥಾಸ್ಥಿತಿಯಲ್ಲಿವೆ.

ಬಂದ್‌ ಹಿನ್ನಲೆ ಮುಂಬೈ ನಗರದಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ನೆರೆಯ ಠಾಣೆ ಜಿಲ್ಲೆಯಲ್ಲಿ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಬೆಳಿಗ್ಗೆಯಿಂದಲೇ ಮುಚ್ಚಿವೆ. ಅನೇಕ ಸ್ಥಳಗಳಲ್ಲಿ ರಸ್ತೆಗಳು ಭಣಗುಡುತ್ತಿದ್ದವು. ಸಾರ್ವಜನಿಕ ಬಸ್ಸುಗಳು ರಸ್ತೆಗಳಿಗೆ ಇಳಿದಿರಲಿಲ್ಲ. ಕೆಲವೇ ಕೆಲವು ಆಟೊ ರಿಕ್ಷಾಗಳು ಓಡಾಡುತ್ತಿರುವುದು ಕಂಡುಬಂದಿದೆ.

ನಗರದಲ್ಲಿ ಮೆಟ್ರೊ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿದ್ದವು. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಮುಂಬೈನಿಂದ ಇತರ ಸ್ಥಳಗಳಿಗೆ ಸಂಚರಿಸುತ್ತಿವೆ. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಎಂಎಸ್ಆರ್‌ಟಿಸಿ ಅಧಿಕಾರಿಗಳು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *