ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ದಿನಾಂಕ ಘೋಷಣೆಯಾಗಿದೆ. ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಅಧಿಸೂಚನೆ ಈಗಾಗಲೇ ಪ್ರಕಟವಾಗಿದ್ದು, ಎಂವಿಎ ಮೈತ್ರಿಕೂಟ ಸೀಟು ಹಂಚಿಕೆಯ ಕಗ್ಗಂಟು ಬಿಡಿಸಿ, ಚುನಾವಣೆಗೆ ತಯಾರಾಗಿದೆ.
ಈ ಕುರಿತು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಘೋಷಣೆ ಮಾಡಿದ್ದಾರೆ. ಮಹಾರಾಷ್ಟ್ರ ರಾಜ್ಯದ ವಿರೋಧ ಪಕ್ಷಗಳು ಚುನಾವಣೆಯನ್ನು ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಮಾಡಿಕೊಂಡು ಎದುರಿಸುತ್ತಿವೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳಿವೆ.
ರಾಜ್ಯದ 288 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 146. ಎಂವಿಎ ಮೈತ್ರಿಕೂಟ ಸೀಟು ಹಂಚಿಕೆ ಘೋಷಣೆ ಮಾಡಿದ್ದು, 2024ರ ಚುನಾವಣೆಯಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್) ಪಕ್ಷಗಳು ತಲಾ 85 ಸೀಟುಗಳಲ್ಲಿ ಕಣಕ್ಕಿಳಿಯಲಿವೆ. ಉಳಿದ ಸ್ಥಾನಗಳನ್ನು ಚಿಕ್ಕಪುಟ್ಟ ಪಕ್ಷ, ಪಕ್ಷೇತರ ಅಭ್ಯರ್ಥಿಗಳಿಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ.
“ಉಳಿದ ಸೀಟುಗಳ ಹಂಚಿಕೆ ಕುರಿತು ಗುರುವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳಾದ ಸಮಾಜವಾದಿ ಪಕ್ಷ ಸೇರಿದಂತೆ ಇತರ ಪಕ್ಷಗಳಿಗೆ ಸೀಟುಗಳನ್ನು ನೀಡಲಾಗುತ್ತದೆ” ಎಂದು ನಾನಾ ಪಟೋಲೆ ಹೇಳಿದರು.
“ನಾವು 270 ಸೀಟುಗಳಲ್ಲಿ ಸಮೀಕ್ಷೆಗಳನ್ನು ಮಾಡಿಸಿದ್ದೆವು. ಸೀಟು ಹಂಚಿಕೆ ಮಾಡುವಾಗ ನಾವು ಸಮಾಜವಾದಿ ಪಕ್ಷ, ಸಿಪಿಐ(ಎಂ), ಸಿಪಿಐ, ಎಎಪಿ ಪಕ್ಷಗಳನ್ನು ಪರಿಗಣಿಸಲಿದ್ದೇವೆ. ಮಹಾಯತಿ ಮೈತ್ರಿಕೂಟದ ಸರ್ಕಾರವನ್ನು ರಾಜ್ಯದಿಂದ ತೊಲಗಿಸಲು ಎಂವಿಎ ಮೈತ್ರಿಕೂಟ ಒಟ್ಟಾಗಿ ಕೆಲಸ ಮಾಡಲಿದೆ” ಎಂದು ನಾನಾ ಪಟೋಲೆ ತಿಳಿಸಿದರು.
2024ರ ಲೋಕಸಭೆ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಎಂವಿಎ ಮೈತ್ರಿಕೂಟ ಸೀಟು ಹಂಚಿಕೆ ಮಾಡಿಕೊಂಡಿದ್ದವು. 48 ಕ್ಷೇತ್ರಗಳ ಪೈಕಿ 30ರಲ್ಲಿ ಮೈತ್ರಿಕೂಟ ಜಯಗಳಿಸಿತ್ತು. ಇದರಲ್ಲಿ ಕಾಂಗ್ರೆಸ್ 13, ಶಿವಸೇವೆ 9 ಸೀಟುಗಳಲ್ಲಿ ಜಯಗಳಿಸಿದ್ದವು.