ದೇಶದಾದ್ಯಂತ ದುಡಿಯುವ ಜನರ ಮಹಾಧರಣಿ | ಬೆಂಗಳೂರಿನ ಕಾರ್ಯಕ್ರಮ ಹೀಗಿರಲಿದೆ

ಬೆಂಗಳೂರು: ಸಂಯುಕ್ತ ಕಿಸಾನ್ ಮೋರ್ಚ್ (ಎಸ್‌ಕೆಎಂ) ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆ ನೀಡಿರುವ 72 ಗಂಟೆಗಳ “ಮಹಾಧರಣಿ” ಭಾನುವಾರ ಬೆಳಿಗ್ಗೆಯಿಂದಲೆ ದೇಶದ ಎಲ್ಲಾ ರಾಜಧಾನಿಗಳಲ್ಲಿ ನಡೆಯಲಿದೆ. ಇದನ್ನು ಅನುಸರಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಕೂಡಾ “ರಾಜಭವನ ಚಲೋ” ಧರಣಿ ನಡೆಯಲಿದೆ. ಕೇಂದ್ರ ಸರ್ಕಾದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು, ಈ ಹಿಂದಿನ ರಾಜ್ಯ ಸರ್ಕಾರ ತಂದಿದ್ದ ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ ಪರ್ಯಾಯ ಜನಪರ ನೀತಿಗಳನ್ನು ಜಾರಿಗೊಳಿಸುವಂತೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಲಿವೆ.

ಬೆಂಗಳೂರಿನಲ್ಲಿ ಮಹಾಧರಣಿಯು ನವೆಂಬರ್ 26, 27, 28ರಂದು ನಡೆಯಲಿದ್ದು, ಭಾನುವಾರ ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಸಾಮೂಹಿಕ ರಾಷ್ಟ್ರ ಧ್ವಜಾರೋಹಣದ ಮೂಲಕ ಚಾಲನೆಗೊಳ್ಳಲಿದೆ. ನಂತರ ಸಂವಿಧಾನದ ಕುರಿತಾದ ಗೀತೆಗಳು ಧರಣಿಯಲ್ಲಿ ಮೊಳಗಳಿದ್ದು, ರೈತರ ಕಾರ್ಮಿಕ ಮುಖಂಡರು ಜೊತೆಗೂಡಲಿದ್ದಾರೆ.

ಇದನ್ನೂ ಓದಿ: ರೈತ-ಕಾರ್ಮಿಕ-ದಲಿತರ 72 ಗಂಟೆಗಳ ಧರಣಿ ಭಾನುವಾರದಿಂದ ಪ್ರಾರಂಭ

ಅಂದೇ ಸಂಜೆ 4 ಗಂಟೆಗೆ ಧರಣಿ ಸ್ಥಳದಲ್ಲೆ ಸಂವಿಧಾನ ಪೀಠಿಕೆ ಅನಾವರಣ ಮಾಡಿ, ಸತ್ಯಾಗ್ರಹಿಗಳಿಗೆ ಸಂವಿಧಾನ ಪೀಠೀಕೆ ಬೋಧನೆ ನಡೆಯಲಿದೆ. ಇಷ್ಟೆ ಅಲ್ಲದೆ, ಐತಿಹಾಸಿಕ ರೈತ ಹೋರಾಟದ ಕುರಿತ “ಕದನ ಕಣ” ಪುಸ್ತಕದ ಬಿಡುಗಡೆ ಕಾರ್ಯಕ್ರಮವೂ ನಡೆಯಲಿದೆ. ಸಂಜೆ 7 ರಿಂದ ರಾತ್ರಿ 10 ಗಂಟೆಯ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

 

 

ಹೋರಾಟದ ಎರಡನೇ ದಿನವಾದ ನವೆಂಬರ್ 27ರ ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ಮತ್ತೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ರೈತ ಮತ್ತು ಕಾರ್ಮಿಕ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಕರಾಳ ಕಾಯ್ದೆಗಳನ್ನು ಅಗ್ನಿ ಕುಂಡಕ್ಕೆ ಹಾಕಿ ಸುಡುವ ಕಾರ್ಯಕ್ರಮವನ್ನು ಕೂಡಾ ರೈತ ಕಾರ್ಮಿಕರು ಹಮ್ಮಿಕೊಂಡಿದ್ದಾರೆ. ಹಾಗೂ ಅಂದು ಸಂಜೆ 7 ರಿಂದ 10ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಿಸಾನ್ ಸಂಘರ್ಷ ಸಾಕ್ಷ್ಯ ಚಿತ್ರ ಪ್ರದರ್ಶನ ಕೂಡಾ ನಡೆಯಲಿದೆ.

ಮಹಾಧರಣಿಯ ಕೊನೆಯ ದಿನವಾದ ನವೆಂಬರ್ 28ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮತ್ತೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಅಂದು ಕೂಡಾ ರೈತ ಮತ್ತು ಕಾರ್ಮಿಕ ಮುಖಂಡರು ಧರಣಿಯ ಭಾಗವಾಗಲಿದ್ದಾರೆ. ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ 72 ಗಂಟೆಗಳ ಮಹಾಧರಣಿ ನಡೆಯಲಿದ್ದು ರಾಜ್ಯದ ದಲಿತ, ರೈತ, ವಿದ್ಯಾರ್ಥಿ, ಮಹಿಳಾ ಮತ್ತು ಕಾರ್ಮಿಕ ಸಂಘಟನೆಗಳು ಇದರಲ್ಲಿ ಸಹಭಾಗಿಯಾಗಲಿವೆ.

ವಿಡಿಯೋ ನೋಡಿ: ಬಹಿರಂಗ ಸಭೆ ಜನವಿರೋಧಿ ಮತ್ತು ಕಾರ್ಪೋರೇಟ್ ನೀತಿಗಳ ವಿರುದ್ದ ದುಡಿಯುವ ಜನರ ಮಹಾಧರಣಿ

Donate Janashakthi Media

Leave a Reply

Your email address will not be published. Required fields are marked *